ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಮೊದಲ ಮಗುವಿನ ಆಗಮನದ ಖುಷಿಯಲ್ಲಿ ತಾರಾ ಕುಟುಂಬವಿದೆ. ಈ ವಿಚಾರವನ್ನು ಸ್ವತಃ ಜನಪ್ರಿಯ ನಟ ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿದ್ದಾರೆ.
ಮಿಲನಾರಿಗೆ ಹೆಣ್ಣು ಮಗು: ಲವ್ ಮಾಕ್ಟೇಲ್ ನಟಿ ನಾರ್ಮಲ್ ಡೆಲಿವರಿ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಗಳ ಆಗಮನದ ಖುಷಿಯನ್ನು ನಟ ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿದ್ದಾರೆ. ಮಗಳು ಹಾಗೂ ಪತ್ನಿ ಚೆನ್ನಾಗಿದ್ದಾರೆಂದು ತಿಳಿಸಿದ್ದಾರೆ.
ಪ್ರಣಿತಾರಿಗೆ ಗಂಡು ಮಗು: ಇನ್ನು, ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ನಟಿ ಪ್ರಣಿತಾ ಸುಭಾಷ್ ಕೂಡಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಈ ಹಿಂದೆ ನಟಿಗೆ ಹೆಣ್ಣು ಮಗು ಆಗಿತ್ತು. ಇದೀಗ ಎರಡನೇ ಮಗುವನ್ನು ಬರಮಾಡಿಕೊಂಡಿರುವ ಖುಷಿ ನಟಿಗಿದೆ.
''ಹೆಮ್ಮೆಯ ಕ್ಷಣವಿದು, ಏಕೆಂದರೆ ನನಗೀಗ ಮಗಳಿದ್ದಾಳೆ'': ನಟ ಡಾರ್ಲಿಂಗ್ ಕೃಷ್ಣ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ದಂಪತಿ ಕ್ಯೂಟ್ ಬೇಬಿ ಡ್ರೆಸ್ ಹಿಡಿದಿರುವ ಫೋಟೋ ಹಂಚಿಕೊಂಡಿರುವ ನಟ, ''ಹೆಣ್ಣು ಮಗುವಿನ ಆಗಮನವಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಮಿಲನಾ, ಈ ಗರ್ಭಾವಸ್ಥೆಯ ಪಯಣದಲ್ಲಿ ನೀವು ಅನುಭವಿಸಿದ ನೋವು, ತ್ಯಾಗ ಮತ್ತು ನಿಮ್ಮ ಧೈರ್ಯ ಕಂಡು ನನಗೆ ಹೆಮ್ಮೆಯಾಗಿದೆ. ಈ ಅದ್ಭುತ ಪ್ರಯಾಣದಲ್ಲಿ ಸಾಗುವ ಎಲ್ಲಾ ತಾಯಂದಿರಿಗೆ ಒಂದು ದೊಡ್ಡ ನಮಸ್ಕಾರ. ಈ ಪ್ರಯಾಣದ ನಂತರ ಮಹಿಳೆಯರ ಮೇಲೆ ನಾನಿಟ್ಟಿದ್ದ ಗೌರವ ದ್ವಿಗುಣಗೊಂಡಿದೆ. ಹೌದು, ನಾನು ಲಕ್ಕಿ ಫಾದರ್. ಹೆಮ್ಮೆಯ ಕ್ಷಣವಿದು. ಏಕೆಂದರೆ ನನಗೀಗ ಮಗಳಿದ್ದಾಳೆ'' ಎಂದು ಬರೆದುಕೊಂಡಿದ್ದಾರೆ.