ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಸಣ್ಣ ಟೀಸರ್ನಿಂದಲೇ ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾದ ಟ್ರೇಲರ್ ಇಂದು ಅನಾವರಣಗೊಂಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ, ನಟಿ ರುಕ್ಮಿಣಿ ವಸಂತ್, ಸುಧಾರಾಣಿ, ಪ್ರಮೋದ್ ಶೆಟ್ಟಿ, ನಿರ್ದೇಶಕ ಡಾ.ಸೂರಿ ಸೇರಿದಂತೆ ಚಿತ್ರತಂಡ ಪಾಲ್ಗೊಂಡಿತ್ತು.
ಹಾಲಿವುಡ್ ಸಿನಿಮಾದ ಬ್ಯಾಟ್ಮ್ಯಾನ್ ಕಾನ್ಸೆಪ್ಟ್ನಲ್ಲಿರುವ ಟ್ರೇಲರ್ ಸದ್ಯ ಯೂಟ್ಯೂಬ್ನಲ್ಲಿ ಒಂದು ಮಿಲಿಯನ್ ವೀಕ್ಷಣೆ ಪಡೆದು ಟ್ರೆಂಡಿಂಗ್ನಲ್ಲಿ ಮೊದಲ ಸ್ಥಾನದಲ್ಲಿದೆ. ಟ್ರೇಲರ್ನಲ್ಲಿ ಶ್ರೀಮುರಳಿ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿರೋದು ಗೊತ್ತಾಗುತ್ತದೆ. ಪಂಚಿಂಗ್ ಡೈಲಾಗ್, ವಾಹ್! ಅನಿಸುವ ಆ್ಯಕ್ಷನ್ ಸನ್ನಿವೇಶಗಳು, ಅದ್ಧೂರಿ ಮೇಕಿಂಗ್ ಬಘೀರ ಚಿತ್ರದ ಮೇಲಿನ ಕುತೂಹಲ ಇಮ್ಮಡಿಗೊಳಿಸಿದೆ. ಚಿತ್ರದಲ್ಲಿ ಪ್ರಕಾಶ್ ರೈ, ಸುಧಾರಾಣಿ, ರುಕ್ಮಿಣಿ ವಸಂತ್, ರಂಗಾಯಣ ರಘು, ಅಚ್ಯುತ್ ಕುಮಾರ್ ಹಾಗೂ ಗರುಡ ರಾಮ್ ಸೇರಿದಂತೆ ದೊಡ್ಡ ಸ್ಟಾರ್ಕಾಸ್ಟ್ ಇದೆ.
ಶ್ರೀಮುರಳಿಗೆ ಜೋಡಿಯಾಗಿ ಚಂದನವನದ ಬಹುಬೇಡಿಕೆಯ ನಟಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಚಿತ್ರದ ಗರುಡನಾಗಿ ಖ್ಯಾತಿ ಹೊಂದಿದ್ದ ರಾಮ್ ಬಘೀರ ಚಿತ್ರದಲ್ಲಿ ವಿಕೃತ ಮುಖದ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.
ಟ್ರೇಲರ್ ಅನಾವರಣ ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ ಮಾತನಾಡಿ, "ನಾನು ಕಂಡ ಬೆಸ್ಟ್ ಡೈರೆಕ್ಟರ್ ಅಂದ್ರೆ ಅದು ಡಾ.ಸೂರಿ. 2014ರಲ್ಲಿ ನಾನು ಮತ್ತೆ ಸೂರಿ ಸಿನಿಮಾ ಮಾಡಬೇಕಿತ್ತು. ಅದರೆ ಆಗಿರಲಿಲ್ಲ. ಈಗ ಸಾಧ್ಯವಾಗಿದೆ. ಇನ್ನು ಒಳ್ಳೆಯ ಔಟ್ಫುಟ್ಗಾಗಿ ಕಲಾವಿದರು, ಕ್ಯಾಮರಾಮ್ಯಾನ್ ಮತ್ತು ತಂತ್ರಜ್ಞರಿಂದ ಸಖತ್ ಕೆಲಸ ತೆಗಿಸಿದ್ದಾರೆ" ಎಂದರು.
"ಇನ್ನೊಂದು ಮುಖ್ಯವಾದ ವಿಷಯ ಅಂದರೆ ಕಥೆ. ನನ್ನ ನೆಚ್ಚಿನ ನಿರ್ದೇಶಕ ಪ್ರಶಾಂತ್ ನೀಲ್ ಈ ಸಿನಿಮಾದ ಕಥೆ ಬರೆದಿದ್ದಾರೆ. ಅವರು ಯಾವಾಗ್ಲೂ ನನ್ನ ಹೃದಯಲ್ಲಿರುತ್ತಾರೆ. ನಾನು ಕಣ್ಣು ಮುಚ್ಚಿ ಬಘೀರ ಚಿತ್ರವನ್ನು ಒಪ್ಪಿಕೊಂಡೆ. ಇನ್ನು ಸಿನಿಮಾ ಆಗೋದಿಕ್ಕೆ ಮುಖ್ಯ ರೂವಾರಿ ಸಿನಿಮಾ ಬಗ್ಗೆ ಫ್ಯಾಷನ್ ಇರುವ ನಿರ್ಮಾಪಕ ವಿಜಯ ಕಿರಂಗದೂರ್ ಸಾರ್. ನಾನು ಸಾಕಷ್ಟು ನಿರ್ಮಾಪಕರ ಜೊತೆ ಕೆಲಸ ಮಾಡಿದ್ದೇನಿ. ಆದ್ರೆ ಈ ರೀತಿಯ ಪ್ರೊಡಕ್ಷನ್ ಹೌಸ್ ನಾನೆಲ್ಲೂ ನೋಡಿಲ್ಲ" ಎಂದು ಹೊಗಳಿದರು.