ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ತಮ್ಮ ಅನಾರೋಗ್ಯದ ಚಿಕಿತ್ಸೆಗಾಗಿ ಇಂದು ಸಂಜೆ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಸಿನಿಮಾ ಮೇಲಿನ ಒಲವು, ಪರಿಶ್ರಮ, ಅಮೋಘ ಅಭಿನಯದಿಂದ ಚಂದನವನದಲ್ಲಿ ತಮ್ಮದೇ ಆದ ಸ್ಟಾರ್ಡಮ್ ಗಿಟ್ಟಿಸಿಕೊಂಡಿರುವ ನಟ ತಮ್ಮ ಎಲ್ಲಾ ಬದ್ಧತೆಗಳನ್ನು ಪೂರ್ಣಗೊಳಿಸಿ, ವಿದೇಶಕ್ಕೆ ತೆರಳುತ್ತಿದ್ದಾರೆ.
ನಿಮಗೆ ಈಗಾಗಲೇ ತಿಳಿಸಿರುವಂತೆ, ಅನಾರೋಗ್ಯದ ಹಿನ್ನೆಲೆ ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಡಿಸೆಂಬರ್ 24ರಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ಸರ್ಜರಿ ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ. ಸದ್ಯ ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಅಭಿಮಾನಿಗಳು ಶೀಘ್ರ ಗುಣಮುಖರಾಗಿ ಬನ್ನಿ ಶಿವಣ್ಣ ಎಂದು ಹಾರೈಸುತ್ತಿದ್ದಾರೆ.
ಇತ್ತೀಚೆಗೆ ಶಿವಮೊಗ್ಗದಲ್ಲಿ ಮಾತನಾಡಿದ್ದ ಹ್ಯಾಟ್ರಿಕ್ ಹೀರೋ, ಸದ್ಯ ನಾನು ಆರೋಗ್ಯವಾಗಿದ್ದೇನೆ. ಬರುವ ತಿಂಗಳು ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆಯಲಿದ್ದೇನೆ. ಜನವರಿಯಿಂದ ಪುನಃ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದೇನೆ ಎಂದು ತಿಳಿಸಿದ್ದರು.
ಸಖತ್ ಯಂಗ್ ಅಂಡ್ ಎನರ್ಜಿಟಿಕ್ ಶಿವರಾಜ್ಕುಮಾರ್ ಯುವಪೀಳಿಗೆಗೆ ಸ್ಫೂರ್ತಿ ಅಂತಲೇ ಹೇಳಬಹುದು. ಅಂದು ಇಂದು ಎಂದೆಂದಿಗೂ ಎವರ್ಗ್ರೀನ್ ಸ್ಟಾರ್. ಇವರಿಗೆ ವಯಸ್ಸು ಲೆಕ್ಕಕ್ಕೇ ಇಲ್ಲ. ಅರವತ್ತೆರಡಾದ್ರೂ ಯುವ ನಟರೂ ನಾಚುವಂತಹ ಲುಕ್, ಫಿಟ್ನೆಸ್, ಎನರ್ಜಿ ಹೊಂದಿರುವ ತಾರೆ. ಹಲವು ಪ್ರಾಜೆಕ್ಟ್ಗಳು ನಟನ ಕೈಯಲ್ಲಿದ್ದು, ಸದ್ಯ ಆರೋಗ್ಯದ ಕಡೆ ಸಂಪೂರ್ಣ ಗಮನ ಹರಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಭಿಮಾನಿಗಳಿಗೆ ಅದ್ಭುತ ಸಿನಿಮಾ ನೀಡೋ ಹುಮ್ಮಸ್ಸಿನಲ್ಲಿರುವ ಸೆಂಚುರಿ ಸ್ಟಾರ್ ಪ್ರಸ್ತುತ ಹೆಲ್ತ್ ಕಡೆ ತಮ್ಮ ಗಮನ ವಹಿಸಿದ್ದಾರೆ. ಆರೋಗ್ಯವಿದ್ದರೆ ಎಲ್ಲವೂ. ಹಾಗಾಗಿ, ಇದೀಗ ಚಿಕಿತ್ಸೆಗೆ ಮುಂದಾಗಿದ್ದಾರೆ. ಈವರೆಗೆ ಮನೆಯಲ್ಲೇ ಕೆಲ ಥೆರಪಿ ಮಾಡಿಸಿಕೊಂಡಿದ್ದರು.