ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ "ಭೈರತಿ ರಣಗಲ್" ಬಿಡುಗಡೆಗೆ ಸಜ್ಜಾಗಿದ್ದು, ಇದೀಗ ಕರುನಾಡ ಚಕ್ರವರ್ತಿಯ 131ನೇ ಸಿನಿಮಾಗೆ ಚಾಲನೆ ಸಿಕ್ಕಿದೆ. ವರಮಹಾಲಕ್ಷ್ಮಿ ಹಬ್ಬದ ಶುಭದಿನದಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಸೆಟ್ಟೇರಿದೆ.
ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ನಿರ್ಮಾಪಕ ಎಸ್ಎನ್ ರೆಡ್ಡಿ ಕ್ಲ್ಯಾಪ್ ಮಾಡಿದ್ದಾರೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಮುಹೂರ್ತದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, "ಎರಡು ವರ್ಷಗಳ ಹಿಂದೆ ಚಿತ್ರತಂಡ ಕಥೆ ಹೇಳಿದ್ದರು. ಯಾಕೆ ಇಷ್ಟು ಲೇಟ್ ಎಂದು ಕೇಳಬೇಡಿ. ಮೊದಲ ಬಾರಿಗೆ ಸ್ಕ್ರಿಪ್ಟ್ ಕೇಳಿದಾಗ ತುಂಬಾ ಚೆನ್ನಾಗಿ ಇತ್ತು. ಆದರೆ ಅಲ್ಲಿ ಏನೋ ಬೇಕಾಗಿತ್ತು ಎಂದು ಹೇಳುತ್ತಿದ್ದೆ. ಆದರೆ ಇಂಟ್ರೆಸ್ಟಿಂಗ್ ಇತ್ತು. ಈ ಚಿತ್ರದಲ್ಲಿ ಎಲ್ಲರಿಗೂ ಕೆಲಸವಿದೆ. ಡೈಲಾಗ್ ರೈಟರ್, ಕ್ಯಾಮೆರಾ ಮೆನ್ಗೆ, ಮ್ಯೂಸಿಕ್ ಡೈರೆಕ್ಟರ್ಗೂ ತುಂಬಾ ತುಂಬಾ ಕೆಲಸವಿದೆ. ಒಂದು ಸಿನಿಮಾವೆಂದರೆ ಟೆಕ್ನಿಕಲ್ ಅನ್ನುತ್ತಾರೆ, ಇಲ್ಲ ಆಕ್ಟರ್ಸ್ ಸಿನಿಮಾ ಎಂದು ಕರೆಯುತ್ತಾರೆ. ಆದರೆ ಇದು ಎಲ್ಲರ ಸಿನಿಮಾ. ಅಭಿಮಾನಿಗಳು ಕುತೂಹಲದಿಂದ ಸಿನಿಮಾ ನೋಡಬೇಕು. ನಾನು ನವೀನ್ ಜೊತೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೇನೆ. ಚಿತ್ರದಲ್ಲಿ ಇನ್ನೊಂದು ಸರ್ಪ್ರೈಸ್ ಕ್ಯಾರೆಕ್ಟರ್ ಇದೆ. ಇದು ಚಿತ್ರದ ಕಥೆಯ ಎಳೆ" ಎಂದರು.
ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಮಾತನಾಡಿ, "ನನಗೆ ಕನ್ನಡ ಮಾತನಾಡಲು ಬರುವುದಿಲ್ಲ. ಚಿತ್ರ ಬಿಡುಗಡೆಯಾಗುವಷ್ಟರಲ್ಲಿ ಕನ್ನಡ ಮಾತನಾಡುತ್ತೇನೆ ಎಂದು ಆಣೆ ಮಾಡುತ್ತೇನೆ. ಶಿವಣ್ಣ ಕಥೆ, ಕ್ಯಾರೆಕ್ಟರ್ ಮೇಲೆ ನಂಬಿಕೆ ಇಟ್ಟು ನನಗೆ ಸಿನಿಮಾ ನಿರ್ದೇಶನಕ್ಕೆ ಅವಕಾಶ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ. ನನ್ನ ಇಬ್ಬರು ನಿರ್ಮಾಪಕರು ಚಿತ್ರದ ಮುಖ್ಯ ಪಿಲ್ಲರ್" ಎಂದು ತಿಳಿಸಿದರು.