ಬೆಂಗಳೂರು: 'O2', 'ಮುಂದಿನ ನಿಲ್ದಾಣ' ಹಾಗೂ 'ಹೊಂದಿಸಿ ಬರೆಯಿರಿ' ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಪ್ರವೀಣ್ ತೇಜ್ ಈಗ ವಿಭಿನ್ನ ಚಿತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಅಂತಹ ಕಥೆ ಹೊಂದಿರುವ ಚಿತ್ರ "ಜಿಗರ್". ಬಹುತೇಕ ಶೂಟಿಂಗ್ ಮುಗಿಸಿರೋ ಜಿಗರ್ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
"ಜಿಗರ್" ಸಿನಿಮಾ ತಂಡ (ETV Bharat) ಬಳಿಕ ಚಿತ್ರದ ನಾಯಕ ಪ್ರವೀಣ್ ತೇಜ್ ಮಾತನಾಡಿ, 'ಪ್ರೇಮಕಥೆಗಳಿಗೆ ಸೀಮಿತನಾಗಿದ್ದ ನನ್ನನ್ನು ನಿರ್ದೇಶಕರು ಈ ಚಿತ್ರದ ಮೂಲಕ ಆ್ಯಕ್ಷನ್ ಹೀರೋ ಮಾಡಿದ್ದಾರೆ. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಜೀವ. ಉತ್ಸಾಹಿ ಯುವಕನೊಬ್ಬ ಫಿಶ್ ಟೆಂಡರ್ ಶಿಪ್ನಲ್ಲಿ ಭಾಗಿಯಾಗುತ್ತಾನೆ. ಆ ಮೂಲಕ ಭೂಗತಲೋಕಕ್ಕೂ ಕಾಲಿಡುತ್ತಾನೆ. ಅಲ್ಲಿ ಮೂರು ನಾಲ್ಕು ಸಂಘಗಳಿರುತ್ತವೆ. ಸಂಘಗಳ ನಡುವೆ ಸಂಘರ್ಷವೂ ಇರುತ್ತದೆ. ಇದು ಚಿತ್ರದ ಪ್ರಮುಖ ಕಥಾಹಂದರ. ಇದರೊಟ್ಟಿಗೆ ಲವ್, ಆ್ಯಕ್ಷನ್, ಕಾಮಿಡಿ ಕೂಡ ನಮ್ಮ ಚಿತ್ರದಲ್ಲಿದೆ' ಎಂದರು.
"ಜಿಗರ್" ಸಿನಿಮಾ ನಾಯಕ, ನಾಯಕಿ (ETV Bharat) ನಂತರ ಚಿತ್ರದ ನಿರ್ದೇಶಕ ಸೂರಿ ಕುಂದರ್ ಮಾತನಾಡಿ, 'ಸುಮಾರು ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ಸ್ವತಂತ್ರ ನಿರ್ದೇಶಕನಾಗಿ ಮೊದಲ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಜಿಗರ್ ಎಂದರೆ ಎರಡು ಗುಂಡಿಗೆವುಳ್ಳವನು ಹಾಗೂ ಯಾವುದಕ್ಕೂ ಅಂಜದವನು ಎಂದು ಅರ್ಥ. ಮಲ್ಪೆ, ಉಡುಪಿ, ಕುಂದಾಪುರ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಚಿತ್ರತಂಡದ ಸದಸ್ಯರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ" ಎಂದರು.
ಈ ಚಿತ್ರದಲ್ಲಿ ಪ್ರವೀಣ್ ತೇಜ್ಗೆ ಜೋಡಿಯಾಗಿ ವಿಜಯಶ್ರೀ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಯಶ್ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಸಿನಿಮಾಗೆ ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ ಮಾಡಿದ್ದು, ಗಣೇಶ್ ಗೀತರಚನೆ ಬರೆದಿದ್ದಾರೆ. ಶಿವಸೇನ ಅವರ ಕ್ಯಾಮರವರ್ಕ್ ಈ ಚಿತ್ರಕ್ಕಿದೆ. ಪೂಜಾ ವಸಂತಕುಮಾರ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಸೂರಿ ಕುಂದರ್ ನಿರ್ದೇಶನವಿದೆ. ಟ್ರೇಲರ್ನಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರ ಜುಲೈ 5ರಂದು ತೆರೆಗೆ ಬರಲಿದೆ.
ಇದನ್ನೂ ಓದಿ:ಚಿತ್ರರಂಗದಲ್ಲಿ 'ದರ್ಶನ್' ಸಂಚಲನ: ಯಾವೆಲ್ಲ ಸ್ಟಾರ್ಸ್ ಜೈಲು ಪಾಲಾಗಿದ್ದರು?, ಇಲ್ಲಿದೆ ಸಂಪೂರ್ಣ ಮಾಹಿತಿ - Actor Darshan Case