ಬಾಲಿವುಡ್ ನಟ ಹಾಗೂ ರಾಜಕಾರಣಿ ಮಿಥುನ್ ಚಕ್ರವರ್ತಿ ಅವರ ಮಾಜಿ ಪತ್ನಿ ಹೆಲೆನಾ ಲ್ಯೂಕ್ (Helena Luke) ಅವರು ಅಮೆರಿಕದಲ್ಲಿ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು ಖ್ಯಾತ ನೃತ್ಯಗಾರ್ತಿ ಮತ್ತು ನಟಿ ಕಲ್ಪನಾ ಅಯ್ಯರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಟಿ ಹೆಲೆನಾ ಅವರ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ವ್ಯಕ್ತವಾಗುತ್ತಿದೆ.
ಭಾರತೀಯ ಚಿತ್ರರಂಗದ ಪ್ರಸಿದ್ಧ ನಟ ಅಮಿತಾಭ್ ಬಚ್ಚನ್ ನಟನೆಯ 1985ರ ಸೂಪರ್ ಹಿಟ್ ಸಿನಿಮಾ 'ಮರ್ದ್'ನಲ್ಲಿನ ಪಾತ್ರಕ್ಕಾಗಿ ಹೆಲೆನಾ ಜನಪ್ರಿಯರಾಗಿದ್ದರು. ಸೂಪರ್ ಸ್ಟಾರ್ ಮಿಥುನ್ ಅವರೊಂದಿಗೆ ಕೇವಲ ನಾಲ್ಕು ತಿಂಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಕ್ಯಾಂಡಿಡ್ ಇಂಟರ್ವ್ಯೂವ್ ಒಂದರಲ್ಲಿ ಅವರು ತಮ್ಮ ಈ ದಾಂಪತ್ಯ ಅವಧಿಯನ್ನು "ಮಬ್ಬಾದ ಕನಸು" ಎಂದು ವಿವರಿಸಿದ್ದರು. ಘಟನೆ ಬಗ್ಗೆ ಸ್ಮರಿಸಿ ವಿಷಾದ ವ್ಯಕ್ತಪಡಿಸಿದ್ದರು.
ಮ್ಯಾಗಜಿನ್ ಸಂದರ್ಶನವೊಂದರಲ್ಲಿ ಮಾತನಾಡುತ್ತ, "ಇದು ಸಂಭವಿಸಬಾರದೆಂದು ನಾನು ಬಯಸಿದ್ದೆ. ಅವರು ನನಗಾಗಿಯೇ ಎಂಬಂತೆ ಅವರ ಮೇಲೆ ನಂಬಿಕೆ ಬರುವಂತೆ ನನ್ನನ್ನು ಬ್ರೈನ್‌ವಾಶ್ ಮಾಡಿದ್ದರು. ದುರಾದೃಷ್ಟವಶಾತ್, ಅವರು ಯಶಸ್ವಿಯಾದರು" ಎಂದು ತಿಳಿಸಿದ್ದರು.
ಗ್ಲ್ಯಾಮರ್ ಲೋಕದಲ್ಲಿ ಗುರುತಿಸಿಕೊಂಡವರಾದರೂ, ದಾಂಪತ್ಯ ಜೀವನ ನಡೆಸಿದರಾದರೂ ಹೆಲೆನಾ ಅವರ ಅನುಭವ ಫೇರಿ ಟೇಲ್ ಕಥೆಯಂತೇನಿರಲಿಲ್ಲ. ಅವರ ಹೇಳಿಕೆ ಪ್ರಕಾರ, ಮಿಥುನ್ ಅವರು ಹೆಲೆನಾರ ತಂದೆಗೆ "ವಿಶ್ವದ ಒಂಭತ್ತನೇ ಅದ್ಭುತ" ದಂತೆ ಅವರನ್ನು ಪರಿಗಣಿಸುವುದಾಗಿ, ಮಗಳನ್ನು ವಿಶೇಷವಾಗಿ ನೋಡುಕೊಳ್ಳುವುದಾಗಿ ಮಾತು ಕೊಟ್ಟಿದ್ದರು. ಆದ್ರೆ ಹೆಲೆನಾ ಅವರು ತಮ್ಮ ಅಲ್ಪಾವಧಿಯ ದಾಂಪತ್ಯ ಜೀವನದಲ್ಲಿ ಒಂಟಿತನವನ್ನು ಅನುಭವಿಸಿದರು.