ಚೆನ್ನೈ (ತಮಿಳುನಾಡು): ಧನುಷ್ ತಮಿಳು ಚಿತ್ರರಂಗದ ಬಹುಬೇಡಿಕೆ ನಟ. ಇತ್ತೀಚೆಗೆ ಬಿಡುಗಡೆಯಾದ ಅವರ ಬಹುನಿರೀಕ್ಷಿತ ಚಿತ್ರ 'ರಾಯನ್' ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದೆ. ಸದ್ಯ ಧನುಷ್ 'ನಿಲವುಕ್ಕು ಎನ್ಮೇಲ್ ಎನ್ನದಿ ಕೋಬಂ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇತ್ತೀಚೆಗೆ ಧನುಷ್ ಸಿನಿಮಾಗಳ ಮೇಲೆ ನಿರ್ಮಾಪಕರ ಸಂಘ ನಿರ್ಬಂಧ ಹೇರಿತ್ತು. ಧನುಷ್ ಜೊತೆ ಸಿನಿಮಾ ಮಾಡಬಯಸುವ ನಿರ್ಮಾಪಕರು ಹಾಜರಾಗಿ ಸಂಘದ ಜೊತೆ ಸಮಾಲೋಚಿಸಬೇಕು ಎಂದು ಕೂಡಾ ತಿಳಿಸಲಾಗಿತ್ತು. ಹಲವು ಚಲನಚಿತ್ರ ನಿರ್ಮಾಪಕರಿಂದ ಅಡ್ವಾನ್ಸ್ ಪಡೆದಿದ್ದರೂ ಕೂಡಾ ಸಿನಿಮಾ ಪ್ರಾರಂಭಿಸಲು ಧನುಷ್ ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ನಟೆ ಮೇಲೆ ನಿರ್ಮಾಪಕರ ಸಂಘ ನಿಷೇಧ ಹೇರಿತ್ತು.
ಈ ವಿಚಾರವಾಗಿ ನಿರ್ಮಾಪಕರ ಸಂಘ (ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ - ಟಿಎಫ್ಪಿಸಿ) ಹಾಗೂ ನಟರ ಸಂಘದ (ನಾಡಿಗರ ಸಂಗಮ) ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ನಿಟ್ಟಿನಲ್ಲಿ ಎರಡೂ ಕಡೆಗಳಿಂದ ವರದಿಗಳು ಬಂತು. ಇತ್ತೀಚೆಗೆ ನಡೆದ ದಕ್ಷಿಣ ಭಾರತ ಕಲಾವಿದರ ಸಂಘದ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ನಾಸರ್, ಧನುಷ್ ವಿಚಾರದಲ್ಲಿ ಉತ್ತಮ ನಿರ್ಧಾರಕ್ಕೆ ಬರಲಾಗುವುದು. ಈ ನಿಟ್ಟಿನಲ್ಲಿ ನಿರ್ಮಾಪಕರ ಸಂಘದ ಜತೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದರು.
ಮಾತುಕತೆ ನಡೆಸಿ ಅಂತಿಮವಾಗಿ ಸುಗಮ ತೀರ್ಮಾನಕ್ಕೆ ಬರಲಾಗಿದೆ. ಈ ವಿಚಾರದಲ್ಲಿ ತಮಗೆ ಬೆಂಬಲ ನೀಡಿದ ದಕ್ಷಿಣ ಭಾರತೀಯ ಕಲಾವಿದರ ಸಂಘಕ್ಕೆ ನಟ ಧನುಷ್ ಧನ್ಯವಾದ ಅರ್ಪಿಸಿದ್ದಾರೆ. ನಿರ್ಮಾಪಕರಾದ ತೇನಾಂಡಾಳ್ ಫಿಲ್ಮ್ಸ್ನ ಮುರಳಿ ಮತ್ತು ಫೈವ್ ಸ್ಟಾರ್ ಕ್ರಿಯೇಷನ್ಸ್ ಕತಿರೇಸನ್ ಅವರು ಎತ್ತಿದ್ದ ದೂರುಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡಿದ ದಕ್ಷಿಣ ಭಾರತ ಕಲಾವಿದರ ಸಂಘಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಸಮಸ್ಯೆ ಪರಿಹರಿಸಿದ್ದು ನನಗೆ ಸಹಾಯವಾಗಿದ್ದು ಮಾತ್ರವಲ್ಲದೇ ಇಂಡಸ್ಟ್ರಿಯ ಒಗ್ಗಟ್ಟು ಪ್ರದರ್ಶಿಸಿದೆ ಎಂದು ತಿಳಿಸಿದ್ದಾರೆ.