ದರ್ಶನ್ ತಮ್ಮ ಮಾಸ್ ಇಮೇಜ್ನಿಂದ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟ. ಆದರೆ, ಇದೀಗ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಅಪಹರಣ, ಅಮಾನವೀಯ ಕೊಲೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಹೀಗಾಗಿ, ದರ್ಶನ್ ನಂಬಿ ಹಣ ಹೂಡಿರುವ ಕೆಲವು ಚಿತ್ರ ನಿರ್ಮಾಪಕರಲ್ಲಿ ಆತಂಕ ಶುರುವಾಗಿದೆ. ಈ ಪ್ರಕರಣದಲ್ಲಿ ಸದ್ಯಕ್ಕೆ ಜಾಮೀನು ಸಿಗುವುದು ಕಷ್ಟ ಎಂಬ ಸಂಗತಿ ಈ ಆತಂಕಕ್ಕೆ ಕಾರಣ.
ದರ್ಶನ್ ಮುಂದಿನ ಸಿನಿಮಾಗಳು:ದರ್ಶನ್ ಚಿತ್ರಕ್ಕೆ ಹಾಕಿದ ಹಣ ತಂದುಕೊಡಬಲ್ಲ ನಟ ಎಂದು ಹೇಳಲಾಗುತ್ತದೆ. ಹಾಗಾಗಿಯೇ ನಿರ್ಮಾಪಕರು ಅವರನ್ನು ಹುಡುಕಿಕೊಂಡು ಬರುತ್ತಿದ್ದರು. ಅದರಂತೆ ಹಲವು ಚಿತ್ರಗಳಿಗೆ ಒಪ್ಪಿಗೆ ಸೂಚಿಸಿದ್ದರು. 'ಕಾಟೇರ' ಸಿನಿಮಾ ಸಕ್ಸಸ್ ಬಳಿಕ 'ಡೆವಿಲ್ ದ ಹೀರೋ' ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದು ಚಿತ್ರೀಕರಣ ನಡೆಯುತ್ತಿದೆ. ಈ ಹಿಂದೆ 'ತಾರಕ್' ಚಿತ್ರ ಮಾಡಿದ್ದ ಮಿಲನ ಸಿನಿಮಾ ಖ್ಯಾತಿಯ ಪ್ರಕಾಶ್ 'ಡೆವಿಲ್' ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣ ಮಾಡುತ್ತಿದ್ದಾರೆ. ಟೀಸರ್ನಿಂದಲೇ ಕೌತುಕ ಹುಟ್ಟಿಸಿರುವ 'ಡೆವಿಲ್' ಕೇವಲ 25 ದಿನಗಳ ಕಾಲ ಶೂಟಿಂಗ್ ಆಗಿದೆ ಎಂಬ ಮಾಹಿತಿ ಇದೆ. ಮೊದಲ ಶೆಡ್ಯೂಲ್‌ನಲ್ಲಿ ಆ್ಯಕ್ಷನ್ ಸಿಕ್ವೇನ್ಸ್ ವೇಳೆ ದರ್ಶನ್ ಎಡಗೈಗೆ ಗಾಯವಾದ್ದರಿಂದ ಶೂಟಿಂಗ್ ಮುಂದಕ್ಕೆ ಹಾಕಬೇಕಾಯಿತು. ರೇಣುಕಾಸ್ವಾಮಿ ಘಟನೆ ನಡೆಯುವ ಎರಡು ದಿನ ಮುನ್ನ ಎರಡನೇ ಹಂತದ ಶೂಟಿಂಗ್ ಆರಂಭವಾಗಿತ್ತು. ಮಂಗಳವಾರ ದರ್ಶನ್ ಚಿತ್ರತಂಡದಲ್ಲಿ ಭಾಗವಹಿಸಬೇಕಿತ್ತು. ಆದರೆ, ಅಷ್ಟರಲ್ಲಿ ಗಂಭೀರ ಸ್ವರೂಪದ ಕೊಲೆ ಕೇಸ್‌ನಲ್ಲಿ ಸಿಲುಕಿದ್ದಾರೆ.
ದರ್ಶನ್ ಬಂಧನದ ಸುದ್ದಿ ಕೇಳಿ ಬರುತ್ತಿದ್ದಂತೆ ನಿರ್ದೇಶಕ ಪ್ರಕಾಶ್ ಚಿತ್ರದ ಚಿತ್ರೀಕರಣ ನಿಲ್ಲಿಸಿದ್ದಾರೆ ಎಂಬ ವರದಿ ಇದೆ. 'ಡೆವಿಲ್' ಚಿತ್ರವನ್ನು ಡಿಸೆಂಬರ್ 25ಕ್ಕೆ ಬಿಡುಗಡೆ ಮಾಡುವುದಾಗಿ ಪ್ರಕಾಶ್ ಈ ಹಿಂದೆಯೇ ಹೇಳಿದ್ದರು. ದರ್ಶನ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೀಗ ಚಿತ್ರವು ಮುಂದಕ್ಕೆ ಹೋಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.