ಕನ್ನಡ ಚಿತ್ರರಂಗದ ದಂತಕಥೆ ಕಾಶೀನಾಥ್ ಸುಪುತ್ರ ಅಭಿಮನ್ಯು ಕಾಶೀನಾಥ್ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಅಭಿಮನ್ಯು ಅವರೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಸಹ ನೆರವೇರಿತು.
ಬೆಂಗಳೂರಿನ ಸಹಕಾರ ನಗರದ ಛೇರ್ಮನ್ ಕ್ಲಬ್ನಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ನಟ ಕೋಮಲ್ ಕುಮಾರ್ ಆಗಮಿಸಿದ್ದರು. ಅಭಿಮನ್ಯು ನಟನೆಯ ಹೊಸ ಚಿತ್ರಕ್ಕೆ ಕೋಮಲ್ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.
ಮುಹೂರ್ತ ಸಮಾರಂಭದಲ್ಲಿ ಮಾತನಾಡಿದ ಕೋಮಲ್ ಕುಮಾರ್, ನಾನು ಸಿನಿಮಾ ಇಂಡಸ್ಟ್ರಿಗೆ ಬಂದು 32 ವರ್ಷಗಳಾಯ್ತು. ಸಿನಿಮಾವೊಂದಕ್ಕೆ ಕ್ಲ್ಯಾಪ್ ಮಾಡಿದ್ದು ಇದೇ ಮೊದಲು. ಸಿನಿಮಾ ಚೆನ್ನಾಗಿ ಆಗಬೇಕು. ಯಾರು ಕ್ಲ್ಯಾಪ್ ಹೊಡೆದಿದ್ದು ಅಂತಾ ಆಗಬಾರದು. ಅಭಿಮನ್ಯು ಅವರು ಯಾರೂ ನನಗೆ ಸಪೋರ್ಟ್ ಮಾಡುತ್ತಿಲ್ಲ ಸರ್, ನಮ್ಮ ತಂದೆ ಇದ್ದಿದ್ದರೆ ನನಗೆ ಬೆಂಬಲ ಕೊಡುತ್ತಿದ್ದರು ಎಂದರು. ನನಗದು ಬಹಳ ಕನೆಕ್ಟ್ ಆಯಿತು. ಚಿಂತಿಸಬೇಡ, ದೇವರಿದ್ದಾನೆ. ಮೆಟ್ಟಿಲನ್ನು ನೋಡುತ್ತಾ ನಿಲ್ಲಬಾರದು. ಹತ್ತಲು ಪ್ರಯತ್ನ ಪಡಬೇಕು. ನಿಮಗೆ ಒಳ್ಳೆದಾಗುತ್ತದೆ. ಪ್ರಯತ್ನ ಪಡುತ್ತಾ ಇರಿ. ಯಾರಿಗೂ ದಿಢೀರ್ ಯಶಸ್ಸು ಸಿಗಲ್ಲ. ನನಗೆ ಯಾರೂ ಇಲ್ಲ ಎಂಬುದನ್ನು ತಲೆಯಿಂದ ತೆಗೆದು ದೇವರು ಇದ್ದಾನೆ ಎಂಬುದನ್ನು ಇಟ್ಟುಕೊಳ್ಳಿ. ನಿಮಗೋಸ್ಕರ ನಾನು ಬಂದೆ. ಚಿತ್ರದ ನಿರ್ದೇಶಕರಿಗೆ, ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ನಟ ಅಭಿಮನ್ಯು ಮಾತನಾಡಿ, ನಿರ್ದೇಶಕ ರಾಜ್‌ಮುರಳಿ ಅವರು ಅಪ್ಪನ ಜಾನರ್ ಇಟ್ಟುಕೊಂಡು ಈಗಿನ ಕಾಲದ ಹುಡುಗರಿಗೆ ತಕ್ಕ ಕಥೆ ಮಾಡಿದರೆ ಹೇಗಿರುತ್ತದೆ? ನಿಮ್ಮನ್ನು ತಲೆಯಲ್ಲಿಟ್ಟುಕೊಂಡು ಪ್ಲ್ಯಾನ್ ಮಾಡಿಕೊಂಡಿದ್ದೇನೆ ಸರ್ ಅಂದರು. ಅಪ್ಪ ಇದ್ದಾಗ ನನಗೆ ಬರುತ್ತಿದ್ದ ಆಫರ್ ಇಂತಹದ್ದೇ. ಅಪ್ಪ ಡೈರೆಕ್ಷನ್ ಮಾಡಬೇಕು. ನಾನು ಆ್ಯಕ್ಟಿಂಗ್ ಮಾಡಬೇಕು. ಅನಂತನ ಅವಾಂತರ ಪಾರ್ಟ್ 2 ಮಾಡಬೇಕು. ಅನುಭವ ಪಾರ್ಟ್ 2 ಮಾಡಬೇಕು ಎಂದು ತಲೆಗೆ ಬರುತ್ತಿತ್ತು. ಆದ್ರೆ ಅಪ್ಪನಿಗೆ ಆ ಕ್ಯಾರೆಕ್ಟರ್ ನನಗೆ ಸೂಟ್ ಆಗಲ್ಲ ಅಂತಾ ಅನಿಸುತ್ತಿತ್ತು. ನನಗೂ ಅದನ್ನು ಮಾಡುತ್ತೇನೆಂಬ ಕಾನ್ಫಿಡೆನ್ಸ್ ಇರಲಿಲ್ಲ. ಇನ್ನು ಸನ್ ಆಫ್ ಕಾಶೀನಾಥ್ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡೋಣಾ ಅಂತಾ ಹೋದಾಗ ಯಾರೋ ಮಾಡಿಬಿಟ್ಟಿದ್ದರು. ಎಲ್ಲರೂ ಕಾಶೀನಾಥ್ ಮಗನಿಗೆ ಸನ್ ಆಫ್ ಕಾಶೀನಾಥ್ ಸಿಗಲಿಲ್ಲ ಅಂದ್ರು. ನಿರ್ದೇಶಕರು ಟೈಟಲ್ ಇಲ್ಲ ಸರ್ ಯಾರೋ ರಿಜಿಸ್ಟರ್ ಮಾಡಿಸಿದ್ದಾರೆ ಅಂದರು. ಆಮೇಲೆ ಅವರೇ ಯೋಚನೆ ಮಾಡಿ 'ಅಭಿಮನ್ಯು ಸನ್ ಆಫ್ ಕಾಶೀನಾಥ್' ಎಂಬ ಶೀರ್ಷಿಕೆ ನೀಡಿದರು.