ಹನುಮಂತು, ಮೋಕ್ಷಿತಾ, ತ್ರಿವಿಕ್ರಮ್, ರಜತ್ ಕಿಶನ್, ಮಂಜು ಮತ್ತು ಭವ್ಯಾ ಬಿಗ್ ಬಾಸ್ ಫಿನಾಲೆ ತಲುಪಿದ್ದಾರೆ. ಈ ವಾರಾಂತ್ಯ ನಡೆಯಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರು ಯಾರೆಂಬುದು ತಿಳಿಯಲಿದೆ. ಪ್ರತೀ ಸ್ಪರ್ಧಿಗಳೂ ಕೂಡಾ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದು, ಯಾರು ಗೆಲುವಿನ ನಗೆ ಬೀರಲಿದ್ದಾರೆ ಅನ್ನೋದು ಸದ್ಯದ ಚರ್ಚೆಯ ವಿಷಯವಾಗಿದೆ.
ಹಳ್ಳಿ ಹೈದ ಹನುಮಂತು ತಮ್ಮ ಮುಗ್ಧತೆ, ಬುದ್ಧಿವಂತಿಕೆ, ತೂಕದ ಮಾತುಗಳಿಂದ ಸಾಕಷ್ಟು ಜನಪ್ರಿಯರಾಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಮನೆ ಒಳ ಹೋಗಿ ಎಲ್ಲರಲ್ಲೋರ್ವರಾಗಿ ತಮ್ಮ ನಡೆ ನುಡಿ ಮೂಲಕ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ಸು ಕಂಡಿದ್ದಾರೆ. ಜನಪ್ರಿಯ ಕಾರ್ಯಕ್ರಮದ ನಿರೂಪಕ, ಅಭಿನಯ ಚಕ್ರವರ್ತಿ ಸುದೀಪ್ ಅವರಿಂದಲೂ ಹಲವು ಬಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಹನುಮಂತು ಬಗ್ಗೆ ಇತ್ತೀಚೆಗಷ್ಟೇ ಎಲಿಮಿನೇಟ್ ಆಗಿರುವ ಗೌತಮಿ ಜಾಧವ್ ಅವರು ಗುಣಗಾನ ಮಾಡಿದ್ದಾರೆ.
ಕಳೆದ ವಾರಾಂತ್ಯ ಡಬಲ್ ಎಲಿಮಿನೇಷನ್ ನಡೆಯಿತು. ತಮ್ಮ ತಾಳ್ಮೆ ಮತ್ತು ಪಾಸಿಟಿವಿಟಿಯಿಂದ ಜನಪ್ರಿಯರಾಗಿದ್ದ ಗೌತಮಿ ಜಾಧವ್ ಶನಿವಾರದ ಸಂಚಿಕೆಯಲ್ಲಿ ಎಲಿಮಿನೇಟ್ ಆಗಿ ಹೊರಬಂದ್ರು. ಫಿನಾಲೆಗೆ ಇನ್ನೊಂದು ಹೆಜ್ಜೆ ಅನ್ನೋವಾಗ ಎಲಿಮಿನೇಟ್ ಆಗಿದ್ದು ಮಾತ್ರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಮನೆಯಿಂದ ಹೊರಬಂದ ಬಳಿಕ ಸತ್ಯ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್ ತಮ್ಮ ಬಿಗ್ ಬಾಸ್ ಪಯಣದ ಬಗ್ಗೆ ಹಂಚಿಕೊಂಡಿದ್ದಾರೆ.