ಕನ್ನಡದ ಜನಪ್ರಿಯ ನಟ ರಕ್ಷಿತ್ ಶೆಟ್ಟಿ ಅವರ '777 ಚಾರ್ಲಿ' ಅತ್ಯಂತ ಪ್ರಸಿದ್ಧ ಚಲನಚಿತ್ರಗಳಲ್ಲೊಂದು. ಕಿರಣ್ ರಾಜ್ ನಿರ್ದೇಶನದಲ್ಲಿ 2022ರಲ್ಲಿ ಮೂಡಿಬಂದ ಈ ಚಿತ್ರ ಮನಮುಟ್ಟುವ ಕಥಾಹಂದರದೊಂದಿಗೆ ಅಭೂತಪೂರ್ವ ಯಶಸ್ಸು ಕಂಡಿದ್ದು, ಇಂದಿಗೂ ಸಿನಿಪ್ರಿಯರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ, '777 ಚಾರ್ಲಿ' ಜಪಾನ್‌ನಲ್ಲಿ ಮ್ಯಾಜಿಕ್ ಮಾಡಲು ಸಜ್ಜಾಗಿದೆ. ಹೌದು, ಜೂನ್‌ನಲ್ಲಿ ಸಾಗರೋತ್ತರ ಪ್ರದೇಶದಲ್ಲಿ ಕನ್ನಡದ ಯಶಸ್ವಿ ಚಿತ್ರ ತೆರೆಗಪ್ಪಳಿಸಲಿದೆ.
ಸಿನಿಮಾ ವ್ಯವಹಾರ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ್ ಶೇರ್ ಮಾಡಿದ್ದಾರೆ. ಜಪಾನೀಸ್ ಭಾಷೆಯಲ್ಲಿ '777 ಚಾರ್ಲಿ'ಯ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ನಟಿಸಿರುವ ಮತ್ತು ಕಿರಣ್ ರಾಜ್ ನಿರ್ದೇಶನದ '777 ಚಾರ್ಲಿ' ಜೂನ್ 28, 2024ರಂದು ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.
ಎ ಸೈಲೆಂಟ್ ವಾಯ್ಸ್, ಜೋಸಿ, ದಿ ಟೈಗರ್ ಮತ್ತು ದಿ ಫಿಶ್‌ನಂತಹ ಯಶಸ್ವಿ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಶೋಚಿಕು ಮೂವಿಸ್ (Shochiku Movies) ಜಪಾನ್‌ನಾದ್ಯಂತ ಈ ಸಿನಿಮಾವನ್ನು ವಿತರಿಸಲಿದೆ ಎಂದು ತರಣ್ ಆದರ್ಶ್ ತಮ್ಮ ಎಕ್ಸ್ ಪೊಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ಶೋಚಿಕು ಮೂವಿಸ್ ಪ್ರಸ್ತುತ ಜಪಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಹಳೆಯ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ. ಜಪಾನ್ ಚಲನಚಿತ್ರ ಉದ್ಯಮದಲ್ಲಿ 100 ವರ್ಷಗಳ ಇತಿಹಾಸ ಹೊಂದಿದೆ.