ಕರ್ನಾಟಕ

karnataka

ETV Bharat / entertainment

ವಿಶ್ವ ಸುಂದರಿ ಸ್ಪರ್ಧೆ; ಭಾರತದ ಪ್ರತಿನಿಧಿಯಾಗಿ ಕನ್ನಡತಿ ಸಿನಿ ಶೆಟ್ಟಿ ಭಾಗಿ - ವಿಶ್ವ ಸುಂದರಿ ಸ್ಪರ್ಧೆ

71st Miss World: ಸುಮಾರು ಮೂರು ದಶಕಗಳ ನಂತರ ವಿಶ್ವ ಸುಂದರಿ ಸ್ಪರ್ಧೆ ಆಯೋಜಿಸುವ ಅವಕಾಶ ಭಾರತಕ್ಕೆ ಲಭಿಸಿದ್ದು ಭಾರತದ ಪ್ರತಿನಿಧಿಯಾಗಿ ಕನ್ನಡತಿ ಸಿನಿ ಶೆಟ್ಟಿ ಭಾಗಿಯಾಗಿದ್ದಾರೆ. ಅವರೊಂದಿಗೆ ವಿವಿಧ ದೇಶಗಳ 120 ಸ್ಪರ್ಧಿಗಳು ಕೂಡ ಭಾಗವಹಿಸಿದ್ದಾರೆ. ಬ್ಯೂಟಿ ವಿತ್ ಎ ಪರ್ಪಸ್ ಎಂಬ ಥೀಮ್​ನಡಿ 21 ದಿನಗಳ ಕಾಲ ಈ ಈವೆಂಟ್​​ಗಳು ನಡೆಯಲಿವೆ.

71st Miss World: 'More than Dreams; I Carry Pride, Hopes, and Love of My Country' Says Sini Shetty
ಕನ್ನಡತಿ ಸಿನಿ ಶೆಟ್ಟಿ

By ETV Bharat Karnataka Team

Published : Feb 19, 2024, 8:18 PM IST

ಹೈದರಾಬಾದ್: ಭಾರತವು 28 ವರ್ಷಗಳ ನಂತರ 71ನೇ ಆವೃತ್ತಿಯ ವಿಶ್ವ ಸುಂದರಿ ಆತಿಥ್ಯ ವಹಿಸಿದೆ. ಫೆ.18 ರಿಂದ ಈ ಇವೆಂಟ್​ ಆರಂಭವಾಗಿದ್ದು, ಮಾ. 9ರ ವರೆಗೆ ನಡೆಯಲಿದೆ. ವಿವಿಧ ದೇಶಗಳ 120 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಸ್ಪರ್ಧೆಯಲ್ಲಿ ಭಾರತದಿಂದ 21 ವರ್ಷದ ಸುಂದರಿ ಸಿನಿ ಶೆಟ್ಟಿ ಸ್ಪರ್ಧಿಸಿದ್ದು, ಭಾನುವಾರ (ಫೆ.18) ನವದೆಹಲಿಗೆ ಆಗಮಿಸಿದರು. ಅವರನ್ನು ಕಾರ್ಯಕ್ರಮದ ಆಯೋಜಕರು ಅದ್ಧೂರಿಯಾಗಿ ಬರಮಾಡಿಕೊಂಡರು. ಈ ವೇಳೆ ಅವರ ಪೋಷಕರು ಕೂಡ ಹಾಜರಿದ್ದರು.

ಕನ್ನಡತಿ ಸಿನಿ ಶೆಟ್ಟಿ

ರಾಷ್ಟ್ರರಾಜಧಾನಿ ಪ್ರವೇಶಕ್ಕೂ ಮುನ್ನ ದೇಶವನ್ನು ಉದ್ದೇಶಿಸಿ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಸಿನಿ ಶೆಟ್ಟಿ, "ತು ಹಿ ಮೇರಿ ಮಂಜಿಲ್ ಹೈ, ಪೆಹಚಾನ್ ತುಜ್ ಹೈ ಸೆ!" (ನೀನೇ ನನ್ನ ಗುರಿ, ನೀನೇ ನನ್ನ ಗುರುತು) ಎಂದು ಬರೆದುಕೊಂಡಿದ್ದಾರೆ. "ಈ ಪ್ರಯಾಣದಲ್ಲಿ ಇಂದು ನಾನು ನನಗಿಂತ ಎತ್ತರದ ಸ್ಥಾನದಲ್ಲಿ ನಿಂತಿದ್ದೇನೆ. ನಾನು ನನ್ನ ದೇಶದ ತ್ರಿವರ್ಣ ಧ್ವಜವನ್ನು ನನ್ನ ಕೈಯಲ್ಲಿ ಮಾತ್ರವಲ್ಲ, ನನ್ನ ಹೃದಯದಲ್ಲಿ ಹಿಡಿದಿದ್ದೇನೆ" ಎಂದು ಅವರು ಹೆಮ್ಮೆ ಕೂಡ ವ್ಯಕ್ತಪಡಿಸಿದ್ದಾರೆ.

2023ರ ವಿಶ್ವ ಸುಂದರಿ ಸ್ಪರ್ಧೆ

ಮುಂಬೈನಲ್ಲಿ ಹುಟ್ಟಿರುವ ಸಿನಿ ಶೆಟ್ಟಿ, ಮೂಲತಃ ಕರ್ನಾಟಕದವರು ಅನ್ನೋದು ಮತ್ತೊಂದು ಖುಷಿಯ ವಿಚಾರ. ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಪದವಿ ಪಡೆದಿರುವ ಈ ಸುಂದರಿ, ಭರತನಾಟ್ಯದಲ್ಲಿ ತರಬೇತಿ ಕೂಡ ಪಡೆದಿದ್ದಾರೆ. ಸುಮಾರು ಮೂರು ದಶಕಗಳ ನಂತರ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಸುತ್ತಿರುವುದರಿಂದ ಭಾರತವನ್ನು ಪ್ರತಿನಿಧಿಸುವ ತಮ್ಮ ಖುಷಿಯನ್ನು ಅವರು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

"71ನೇ ವಿಶ್ವ ಸುಂದರಿ ಸ್ಪರ್ಧೆಗೆ ಈ ಹಾದಿಯನ್ನು ಪ್ರಾರಂಭಿಸುತ್ತಿದ್ದೇನೆ. ನಾನು ನನ್ನ ಕನಸುಗಳಿಗಿಂತಲೂ ಹೆಚ್ಚಿನದ್ದನ್ನು ಹೊತ್ತುಕೊಂಡಿರುವೆ. ನಾನು ನನ್ನ ದೇಶದ ಹೆಮ್ಮೆ, ಭರವಸೆ ಮತ್ತು ಪ್ರೀತಿಯನ್ನು ಸಹ ಹೊತ್ತಿದ್ದೇನೆ. ಈ ಕ್ಷಣದಿಂದ ನಾನು ಸಿನಿ ಶೆಟ್ಟಿ ಮಾತ್ರವಲ್ಲ; ನಾನು ಭಾರತ. ನಾನು ಇಡುವ ಪ್ರತಿ ಹೆಜ್ಜೆ, ನಾನು ಮಾತನಾಡುವ ಪ್ರತಿಯೊಂದು ಮಾತುಗಳು, ನನ್ನನ್ನು ಬೆಳೆಸಿದ ನೆಲ, ನನ್ನನ್ನು ರೂಪಿಸಿದ ಸಂಸ್ಕೃತಿ ಮತ್ತು ನನ್ನನ್ನು ನಂಬುವ ಜನರ ಪ್ರತಿಬಿಂಬವಾಗಿರುತ್ತೇನೆ. ರಾಷ್ಟ್ರ ಧ್ವಜವನ್ನು ಹೆಮ್ಮೆ ಮತ್ತು ಗೌರವದಿಂದ ಹಿಡಿದು ಮುನ್ನಡೆಯುತ್ತೇನೆ. ಇದು ನನಗಾಗಿ, ನಮಗಾಗಿ, ಭಾರತಕ್ಕಾಗಿ" ಎಂದು ಸಿನಿ ಶೆಟ್ಟಿ ಶೀರ್ಷಿಕೆ ಬರೆದಿದ್ದಾರೆ.

ಫೆಬ್ರುವರಿ 20 ರಂದು ನವದೆಹಲ್ಲಿ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ITDC) ಆಯೋಜಿಸಿರುವ "ದಿ ಓಪನಿಂಗ್ ಸೆರಮನಿ" ಮತ್ತು "ಇಂಡಿಯಾ ವೆಲ್ಕಮ್ಸ್ ದಿ ವರ್ಲ್ಡ್ ಗಾಲಾ" ದೊಂದಿಗೆ ಈ ಇವೆಂಟ್ ಪ್ರಾರಂಭವಾಗಲಿದೆ. ದೆಹಲಿಯ ಸ್ಟಾರ್​ ಹೋಟೆಲ್ ದಿ ಅಶೋಕ್‌ನಲ್ಲಿ ಭರ್ಜರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಗ್ರ್ಯಾಂಡ್ ಫಿನಾಲೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾರ್ಚ್ 9 ರಂದು ನಡೆಯಲಿದೆ. ಹೆಸರಾಂತ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ.

2023ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸುವುದರೊಂದಿಗೆ ಭಾರತ ಒಟ್ಟು ಎರಡನೇ ಬಾರಿ ಈ ಸ್ಪರ್ಧೆ ಆಯೋಜಿಸಿದೆ. 27 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಈ ಸ್ಪರ್ಧೆ ನಡೆದಿತ್ತು. ಅದರಲ್ಲಿ ಗ್ರೀಸ್‌ನ 18 ವರ್ಷದ ಯರಿನ್ ಸ್ಕ್ಲಿವಾ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದರು. ಈ ಬಾರಿ 21 ವರ್ಷದ ಸಿನಿ ಶೆಟ್ಟಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕಳೆದ ಬಾರಿ ಪೂವ್ತೊ ರಿಕೊದಲ್ಲಿ ನಡೆದ ಸ್ಪರ್ಧೆಯಲ್ಲಿ ಪೊಲೆಂಡ್‌ನ ಕೆರೊಲಿನಾ ಬಿಲಾವಸ್ಕ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಮಾನುಷಿ ಚಿಲ್ಲರ್‌ ಅವರು 2017ರಲ್ಲಿ ಭಾರತಕ್ಕೆ ವಿಶ್ವ ಸುಂದರಿ ಕೀರ್ತಿ ತಂದುಕೊಟ್ಟ ಇತ್ತೀಚಿನವರು.‌ 1966ರಲ್ಲಿ ರೀಟಾ ಫರಿಯಾ ವಿಶ್ವ ಸುಂದರಿ ಪಟ್ಟವನ್ನು ಭಾರತಕ್ಕೆ ಮೊದಲ ಬಾರಿಗೆ ತಂದುಕೊಟ್ಟವರಾಗಿದ್ದು, 1994ರಲ್ಲಿ ಐಶ್ವರ್ಯ ರೈ, 1997ರಲ್ಲಿ ಡಯಾನಾ ಹೇಡನ್, 1999ರಲ್ಲಿ ಯುಕ್ತಾ ಮುಖೇ, 2000ದಲ್ಲಿ ಪ್ರಿಯಾಂಕಾ ಚೋಪ್ರಾ ಕೂಡ ಗೆದ್ದಿದ್ದಾರೆ. ಬ್ಯೂಟಿ ವಿತ್ ಎ ಪರ್ಪಸ್ ಎಂಬ ಥೀಮ್​ನಡಿ 21 ದಿನಗಳ ಈ ಕಾಲ ಇವೆಂಟ್​​ಗಳು ನಡೆಯಲಿವೆ.

ಇದನ್ನೂ ಓದಿ:28 ವರ್ಷಗಳ ಬಳಿಕ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ: ಸಂಪೂರ್ಣ ಮಾಹಿತಿ ನಿಮಗಾಗಿ

ABOUT THE AUTHOR

...view details