2022ರಲ್ಲಿ ಇಡೀ ಭಾರತೀಯ ಸಿನಿಮಾ ರಂಗವನ್ನೇ ತನ್ನತ್ತ ಸೆಳೆದ ಕನ್ನಡ ಚಿತ್ರರಂಗದಲ್ಲೀಗ ಸಿನಿಮಾಗಳು ಸಕ್ಸಸ್ ಕಾಣುತ್ತಿಲ್ಲವೆಂಬ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಈ ಮಧ್ಯೆ ಗೌರಿಶಂಕರ್ ಮುಖ್ಯಭೂಮಿಕೆಯ, ರಾಜ್ ಗುರು ನಿರ್ದೇಶನದ 'ಕೆರೆಬೇಟೆ' ಸಿನಿಮಾ 50 ದಿನಗಳನ್ನು ಪೂರೈಸಿದೆ. ಸಿನಿಮಾಗಳು ಹಿಟ್ ಆಗುತ್ತಿಲ್ಲ, ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಿಲ್ಲವೆಂಬ ಈ ಪರಿಸ್ಥಿತಿಯಲ್ಲಿ 'ಕೆರೆಬೇಟೆ' 50 ದಿನ ಪೂರೈಸಿರುವುದು ಖುಷಿಯ ವಿಚಾರ.
ರಾಜ್ಗುರು, ಗೌರಿಶಂಕರ್ ಸೇರಿದಂತೆ ಸಂಪೂರ್ಣ ಚಿತ್ರತಂಡ ಕಷ್ಟಪಟ್ಟು, ಇಷ್ಟಪಟ್ಟು ಮಾಡಿದ ಸಿನಿಮಾವೇ 'ಕೆರೆಬೇಟೆ'. ಭಾರಿ ನಿರೀಕ್ಷೆ, ಕುತೂಹಲದೊಂದಿಗೆ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿತ್ತು. ಕುತೂಹಲಕ್ಕೆ ತಕ್ಕಂತೆ ಸಿನಿಮಾ ಕೂಡ ಅದ್ಭುತವಾಗಿ ಮೂಡಿ ಬಂದಿತ್ತು. ಆದರೆ ಕಮರ್ಷಿಯಲ್ ಆಗಿ ಸಿನಿಮಾ ಯಾಕೋ ದೊಡ್ಡಮಟ್ಟದ ಸಕ್ಸಸ್ ಕಾಣಲಿಲ್ಲ. ಈ ಬೇಸರ ಕೂಡಾ ತಂಡಕ್ಕಿದೆ. ಕಮರ್ಷಿಯಲ್ ಆಗಿ ದೊಡ್ಡಮಟ್ಟದ ಸಕ್ಸಸ್ ಆಗದಿದ್ದರೂ, ಜನರ ಮನ ಗೆದ್ದಿರುವುದು ತಂಡದ ಶ್ರಮಕ್ಕೆ ಸಿಕ್ಕ ಫಲವಾಗಿದೆ.
ಇದೇ ಖುಷಿಯಲ್ಲಿ ಚಿತ್ರತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು. ಸಿನಿಮಾಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಮೊಮೆಂಟೋಗಳನ್ನು ಕೊಡುವ ಮೂಲಕ ಚಿತ್ರತಂಡ 50 ದಿನಗಳನ್ನು ಪೂರೈಸಿದ ಸಂಭ್ರಮವನ್ನು ಆಚರಿಸಿತು. ಕೆರೆಬೇಟೆ ಸಕ್ಸಸ್ ಸಂಭ್ರಮಾಚರಣೆಗೆ ಖ್ಯಾತ ನಿರ್ದೇಶಕರಾದ ಶಶಾಂಕ್, ದಯಾಳ್ ಪದ್ಮನಾಭ್ ಮತ್ತು ನಿರ್ಮಾಪಕ ಉದಯ್ ಮೆಹ್ತಾ, ನಟ ಪ್ರಥಮ್ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ಗೌರಿ ಶಂಕರ್, ಸಿನಿಮಾ ಕಮರ್ಷಿಯಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿಲ್ಲ. ಆದರೆ ಜನ ಒಳ್ಳೆಯ ರಿವ್ಯೂವ್ ಕೊಟ್ಟಿದ್ದಾರೆ. ಎಲ್ಲೇ ಹೋದರೂ ಕೆರೆಬೇಟೆ ಹೀರೋ ಅಂತಾ ಗುರುತಿಸುತ್ತಾರೆ. ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ ಕೆರೆಬೇಟೆ 50 ದಿನ ಓಡಿದೆ. ಇನ್ನೂ ಕೆಲ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಈ ಖುಷಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಎನ್ನುವ ಕಾರಣಕ್ಕೆ 50 ದಿನದ ಸಂಭ್ರಮವನ್ನು ಇಟ್ಟುಕೊಂಡಿದ್ದೇವೆ. 'ಕೆರೆಬೇಟೆ' ನನ್ನ ದೊಡ್ಡ ಕನಸಾಗಿತ್ತು. ಆದರೆ ಕಮರ್ಷಿಯಲ್ಆಗಿ ಸಕ್ಸಸ್ ಆಗದೇ ಇರುವ ಬೇಸರವೂ ಇದೆ. ಇನ್ಮುಂದೆ ಒಳ್ಳೆಯ ಕಥೆ ಬಂದರೆ ನಟಿಸುತ್ತೇನೆ ಅಷ್ಟೇ, ಆದರೆ ಪ್ರೊಡಕ್ಷನ್ ಸದ್ಯಕ್ಕೆ ಮಾಡಲ್ಲ ಎಂದು ತಿಳಿಸಿದರು.
ನಿರ್ದೇಶಕ ರಾಜ್ಗುರು ಮಾತನಾಡಿ, ನನ್ನ ಕನಸನ್ನು ನನಸು ಮಾಡಿದ ಜನಮನ ಸಿನಿಮಾ ಸಂಸ್ಥೆಗೆ ಧನ್ಯವಾದಗಳು. ಈ ಸಿನಿಮಾಗೆ ದೊಡ್ಡ ದೊಡ್ಡ ಡೈರೆಕ್ಟರ್ಸ್, ಹೀರೋ ಹಾಗೂ ಹೀರೋಯಿನ್ಸ್ ಸಪೋರ್ಟ್ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದರು.