'ಟಾಕ್ಸಿಕ್', ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಹೈ ವೋಲ್ಟೇಜ್ ಸಿನಿಮಾ. 'ಕೆಜಿಎಫ್ ಚಾಪ್ಟರ್ 2' ಬಳಿಕ ಯಶ್ ನಟಿಸುತ್ತಿರುವ ಬಹು ನಿರೀಕ್ಷೆಯ ಚಿತ್ರ. ಹೀರೋ, ಟೈಟಲ್, ಮೋಷನ್ ಪಿಕ್ಚರ್ನಿಂದಲೇ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಟಾಕ್ ಆಗುತ್ತಿರುವ ಈ ಚಿತ್ರ ಒಂದಿಷ್ಟು ಕಾನೂನು ಸವಾಲು ಹಾಗೂ ಬಹು ಭಾಷೆಯ ಸ್ಟಾರ್ ನಟ, ನಟಿಯರ ವಿಚಾರಕ್ಕೆ ಬೇಜಾನ್ ಸೌಂಡ್ ಮಾಡುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಅರಣ್ಯ ಭೂಮಿಯ ಜಾಗದಲ್ಲಿ ಶೂಟಿಂಗ್ ಸೆಟ್ ನಿರ್ಮಾಣಕ್ಕಾಗಿ ಸಾಕಷ್ಟು ಮರಗಳನ್ನು ಕಡಿಯಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ, 'ಟಾಕ್ಸಿಕ್' ಶೂಟಿಂಗ್ ಸದ್ಯ ಯಾವ ಹಂತದಲ್ಲಿದೆ? ಅರಣ್ಯ ಭೂಮಿಯಲ್ಲಿ ಅದ್ದೂರಿ ಸೆಟ್ಟುಗಳನ್ನು ಹಾಕೋ ಸಲುವಾಗಿ ಮರಗಳ ಮರಣ ಹೋಮ ನಡೆದಿರೋದು ನಿಜವೇ? ಎಂಬುದರ ಬಗ್ಗೆ ಚಿತ್ರದ ಹಿಂದಿರುವ 'ಕೆವಿನ್' ಸಂಸ್ಥೆಯ ಮಾರ್ಕೆಟಿಂಗ್ ಮುಖ್ಯಸ್ಥ ಸುಪ್ರೀತ್ ಈಟಿವಿ ಭಾರತ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
500 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ:ಸುಪ್ರೀತ್ ಪ್ರಕಾರ, ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರವನ್ನು ಕೆವಿಎನ್ ಸಂಸ್ಥೆ ಮತ್ತು ಯಶ್ ಅವರ ಮಾಸ್ಟರ್ ಮೈಂಡ್ ಪ್ರೊಡಕ್ಷನ್ ಹೌಸ್ ಸೇರಿ ಬರೋಬ್ಬರಿ 500 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಟಾಕ್ಸಿಕ್ ಚಿತ್ರದ ಕಥೆ ಬಗ್ಗೆ ಸುಳಿವು ನೀಡದ ಸುಪ್ರೀತ್, ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಅಲ್ಲ ಬದಲಾಗಿ ವರ್ಲ್ಡ್ ವೈಡ್ ಮಟ್ಟದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಕಾರಣಕ್ಕೆ ಹಾಲಿವುಡ್ ಸೇರಿ ಎಲ್ಲಾ ಭಾಷೆಯ ಸ್ಟಾರ್ಗಳು ಟಾಕ್ಸಿಕ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸ್ವಂತ ಜಾಗದಲ್ಲಿ ನಡೆಯುತ್ತಿದೆ ಚಿತ್ರೀಕರಣ:ಬೆಂಗಳೂರಿನ ಹೆಚ್ಎಂಟಿ ಜಾಗ ಅರಣ್ಯ ಭೂಮಿ ಎಂದು ಸುದ್ದಿಯಾಗುತ್ತಿದೆ. ಅದೆಲ್ಲವೂ ಸುಳ್ಳು. ಅದು ನಮಗೆ ಸೇರಿರುವ ಸ್ವಂತ ಜಾಗ. ಅದು ಸರ್ಕಾರ ಅಥವಾ ಅರಣ್ಯ ಭೂಮಿ ಅಂತಾ ಬರೋದಿಲ್ಲ. ನಮ್ಮ 20 ಎಕರೆ ಜಾಗದ ಪೈಕಿ 2 ಎಕರೆ ಜಾಗದಲ್ಲಿ ಸೆಟ್ ನಿರ್ಮಾಣ ಮಾಡಲಾಗಿದೆ. ಹೌದು, ಅದ್ಧೂರಿ ಸೆಟ್ಗಳನ್ನು ನಿರ್ಮಾಣ ಮಾಡಿದ್ದೇವೆ. ಆ ಜಾಗಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಹಾಗಾಗಿ, ಯಾವುದೇ ವಿಚಾರಕ್ಕೆ ನಾವು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದರು.
ಟಾಕ್ಸಿಕ್ ಸಿನಿಮಾದ ಶೂಟಿಂಗ್ ಅನ್ನು ಲಂಡನ್, ಶ್ರೀಲಂಕಾ, ಗೋವಾದಲ್ಲಿಯೂ ಮಾಡಬೇಕು ಅಂತಾ ಅಂದುಕೊಂಡಿದ್ವಿ. ಆದರೆ ನಮಗೆ ಕೆಲವು ಕಡೆಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಗದ ಕಾರಣ ಗೋವಾ ಶೈಲಿಯಲ್ಲಿಯೇ ಸೆಟ್ಟುಗಳನ್ನು ನಿರ್ಮಾಣ ಮಾಡಿದ್ದೇವೆ. ಈಗಾಗಲೇ 30 ದಿನ ಶೂಟಿಂಗ್ ನಡೆದಿದೆ. ಈ ಒಂದೊಂದು ಶೂಟಿಂಗ್ ಸೆಟ್ಗೆ ಬರೋಬ್ಬರಿ 40 ಕೋಟಿ ರೂ. ಖರ್ಚಾಗಿದೆ. ಕಲಾ ನಿರ್ದೇಶಕ ಮೋಹನ್ ಬಿ ಕೆರೆ ನೇತೃತ್ವದಲ್ಲಿ ಈ ಸೆಟ್ಟುಗಳು ನಿರ್ಮಾಣಗೊಂಡಿದ್ದು, ಪ್ರತಿ ದಿನ 1 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.