ಹೈದರಾಬಾದ್(ತೆಲಂಗಾಣ): ಇತ್ತೀಚೆಗೆ 'ಪುಷ್ಪ 2: ದಿ ರೂಲ್' ಪ್ರೀಮಿಯರ್ ಶೋ ಸಂದರ್ಭದಲ್ಲಿ ಹೈದರಾಬಾದ್‌ನ ಸಂಧ್ಯಾ ಸಿನಿಮಾ ಥಿಯೇಟರ್‌ನ ಹೊರಭಾಗ ಭಾರೀ ಕಾಲ್ತುಲಿತ ಉಂಟಾಗಿ ಓರ್ವ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನು ಇಂದು ಹೈದರಾಬಾದ್ ಪೊಲೀಸರು ಬಂಧಿಸಿದ್ದು, ಇಲ್ಲಿನ ನಾಂಪಲ್ಲಿ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪೊಲೀಸರು ನಟನನ್ನು ಚಂಚಲಗುಡ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ. ಈ ಮೂಲಕ ಅಲ್ಲೂ ಅರ್ಜುನ್ ಡಿ.27ರ ತನಕ ಜೈಲುವಾಸ ಅನುಭವಿಸಬೇಕಿದೆ.
ಇಂದು ಬೆಳಗ್ಗೆಯಿಂದ ನಡೆದ ಬೆಳವಣಿಗೆ:
- ಅಲ್ಲು ಅರ್ಜುನ್ ಅವರನ್ನು ಬೆಳಗ್ಗೆ ವಶಕ್ಕೆ ಪಡೆದ ಪೊಲೀಸರು ನಂತರ ಬಂಧಿಸಿದರು.
- ತಂದೆ, ಸಹೋದರ ಮತ್ತು ಚಿಕ್ಕಪ್ಪ ಪೊಲೀಸ್ ಠಾಣೆಗೆ ತೆರಳಿದರು.
- ಅಲ್ಲು ಅರ್ಜುನ್ ಅವರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಗಾಂಧಿ ಆಸ್ಪತ್ರೆಗೆ ಕರೆದೊಯ್ದರು.
- ಬಳಿಕ ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಮತ್ತೊಂದೆಡೆ, ಮಗಾಸ್ಟಾರ್ ಚಿರಂಜೀವಿ ತನ್ನ ಪತ್ನಿಯೊಂದಿಗೆ ಅಲ್ಲು ಅರ್ಜುನ್ ಮನೆಗೆ ಹೋಗಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪ್ರಕರಣವೇನು?: 'ಪುಷ್ಪ' ಸೀಕ್ವೆಲ್ ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಡಿಸೆಂಬರ್ 4ರ ರಾತ್ರಿ ಪ್ರೀ ರಿಲೀಸ್ ಶೋಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಂದು ನಾಯಕ ನಟ ಅಲ್ಲು ಅರ್ಜುನ್ ಆಗಮಿಸಿದ ಹಿನ್ನೆಲೆಯಲ್ಲಿ ಭಾರೀ ಜನಸಂದಣಿ ಉಂಟಾಗಿತ್ತು. ಸಂಧ್ಯಾ ಥಿಯೇಟರ್‌ನ ಹೊರಗೆ ನಡೆದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದರು. ಅಷ್ಟೇ ಅಲ್ಲದೇ, ಅವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.