ಬೆಂಗಳೂರು: ಭಾರತದ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆ ಹೊಂದಿದ್ದು, ಅಭ್ಯರ್ಥಿಗಳ ಭವಿಷ್ಯ ರೂಪಿಸುವಲ್ಲಿ ಈ ಪರೀಕ್ಷೆಗಳು ನಿರ್ಣಾಯಕ ಪಾತ್ರ ಹೊಂದಿವೆ. ಉನ್ನತ ಶಿಕ್ಷಣ ಸೇರಿದಂತೆ ಉದ್ಯೋಗಕ್ಕಾಗಿ ಅನೇಕ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯರ್ಥಿಗಳು ಎದುರಿಸಲೇಬೇಕಿದೆ. ಆದರೆ, ಇದರಲ್ಲಿ ಪಾಸ್ ಆಗುವುದು ಸುಲಭದ ಮಾತಲ್ಲ. ಇಂತಹ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಹಲವು ವರ್ಷಗಳನ್ನೇ ಮೀಸಲಿಡಬೇಕು. ಭಾರತದಲ್ಲಿರುವ ಅತ್ಯಂತ ಕಠಿಣ ಪರೀಕ್ಷೆಗಳ ಮಾಹಿತಿ ಇಲ್ಲಿದೆ.
ಯುಪಿಎಸ್ಸಿ ಸಿಎಸ್ಇ(ನಾಗರಿಕ ಸೇವಾ ಪರೀಕ್ಷೆ): ಕೇಂದ್ರ ಲೋಕ ಸೇವಾ ಆಯೋಗದಿಂದ ನಡೆಸಲ್ಪಡುವ ನಾಗರಿಕ ಸೇವಾ ಪರೀಕ್ಷೆ ದೇಶದ ಅತ್ಯಂತ ಕಠಿಣ ಪರೀಕ್ಷೆ. ಸರ್ಕಾರದ ಗ್ರೇಡ್ 1 ಉದ್ಯೋಗ ಪಡೆಯಲು ಈ ಪರೀಕ್ಷೆ ಪಾಸ್ ಆಗುವುದು ಅವಶ್ಯಕ. ಪ್ರತೀ ವರ್ಷ 10 ಲಕ್ಷ ಮಂದಿ ಈ ಪರೀಕ್ಷೆ ಎದುರಿಸುತ್ತಾರೆ. ಆದರೆ, ಉತ್ತೀರ್ಣರಾಗಿ ಉದ್ಯೋಗ ಪಡೆಯುವವರ ಸಂಖ್ಯೆ ಕೇವಲ ಶೇ. 0.1ರಿಂದ 0.3ರಷ್ಟು ಮಾತ್ರ.
ಐಐಟಿ-ಜೆಇಇ: ಭಾರತದಲ್ಲಿ ಇಂಜಿನಿಯರಿಂಗ್ ಶಿಕ್ಷಣದ ಕುರಿತ ಕ್ರೇಜ್ ಕಡಿಮೆ ಇಲ್ಲ. ಐಐಟಿ ಸೇರಿದಂತೆ ಪ್ರಾಥಮಿಕ ಇಂಜಿನಿಯರಿಂಗ್ ಕಾಲೇಜ್ಗಳ ಸೀಟ್ ಪಡೆಯಲು ಈ ಪರೀಕ್ಷೆ ಎದುರಿಸುವುದು ಅಗತ್ಯವಾಗಿದೆ. ಪ್ರತೀ ವರ್ಷ ಪರೀಕ್ಷೆಯನ್ನು 6 ಲಕ್ಷ ವಿದ್ಯಾರ್ಥಿಗಳು ಎದುರಿಸುತ್ತಾರೆ. ಆದರೆ, ಆಯ್ಕೆಯಾಗುವುದು ಕೇವಲ ಶೇ.25ರಿಂದ 30ರಷ್ಟು ಮಾತ್ರ.
ಸಿಎಟಿ(ಸಾಮಾನ್ಯ ಪ್ರವೇಶ ಪರೀಕ್ಷೆ):ಸ್ನಾತಕೋತ್ತರ ಮ್ಯಾನೇಜ್ಮೆಂಟ್ ಪ್ರೋಗ್ರಾಂ ಪ್ರವೇಶಾತಿ ಪರೀಕ್ಷೆ ಇದಾಗಿದ್ದು, ಈ ಪರೀಕ್ಷೆಗೆ ಪ್ರತೀ ವರ್ಷ 2.30 ಲಕ್ಷ ಅಭ್ಯರ್ಥಿಗಳು ಎದುರಾಗುತ್ತಾರೆ. ಇದರಲ್ಲಿ ಆಯ್ಕೆಯಾಗುವುದು ಶೇ.2ರಷ್ಟು ಮಂದಿ.
ಸಿಎ(ಚಾರ್ಟೆಡ್ ಅಕೌಂಟೆಂಟ್): ಇನ್ಸಿಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ಪ್ರತೀ ವರ್ಷ ಸಿಎ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆ ಕೂಡ ಉನ್ನತ ಗುಣಮಟ್ಟದ ಪರೀಕ್ಷೆಯಾಗಿದೆ. ಪ್ರತೀ ವರ್ಷ 95 ಸಾವಿರ ಮಂದಿ ಈ ಪರೀಕ್ಷೆ ಎದುರಿಸುತ್ತಾರೆ. ಇದರಲ್ಲಿ ಆಯ್ಕೆಯಾಗುವುದು ಕೇವಲ ಶೇ 25ರಷ್ಟು ಅಭ್ಯರ್ಥಿಗಳು ಮಾತ್ರ.
ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್): ವೈದ್ಯಕೀಯ ಶಿಕ್ಷಣ ಪಡೆಯುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನೀಟ್ ಪರೀಕ್ಷೆ ಎದುರಿಸುತ್ತಾರೆ. ವಿಶೇಷವಾಗಿ ಪದವಿಪೂರ್ವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪರೀಕ್ಷೆಗೆ ಈ ಪರೀಕ್ಷೆ ಪಾಸ್ ಆಗುವುದು ಅಗತ್ಯ. ಪ್ರತೀ ವರ್ಷ 18 ಲಕ್ಷ ಮಂದಿ ದೇಶದಲ್ಲಿ ಪರೀಕ್ಷೆ ಎದುರಿಸಿದರೂ ಆಯ್ಕೆಯಾಗುವುದು ಶೇ.7ರಷ್ಟು. ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇದೂ ಒಂದು.
ಗೇಟ್(ಗ್ರಾಜುಯೇಟ್ ಅಪ್ಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್): ಪ್ರತಿಷ್ಠಿತ ಐಐಟಿ ಮತ್ತು ಐಐಎಸ್ಸಿಗಳ ಪ್ರವೇಶಕ್ಕೆ ಈ ಗೇಟ್ ಪರೀಕ್ಷೆಯನ್ನು ಜಂಟಿಯಾಗಿ ನಡೆಸಲಾಗುತ್ತದೆ. ಇಂಜಿನಿಯರಿಂಗ್ ಮತ್ತು ತಾಂತ್ರಿಕ ಸ್ನಾತಕೋತ್ತರ ಪದವಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಈ ಪರೀಕ್ಷೆ ಎದುರಿಸುತ್ತಾರೆ. ಪ್ರತೀ ವರ್ಷ 7 ಲಕ್ಷ ಮಂದಿ ಈ ಪರೀಕ್ಷೆ ಬರೆಯುತ್ತಿದ್ದು, ಶೇ.17ರಷ್ಟು ಮಂದಿ ಮಾತ್ರ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ.
ಎನ್ಡಿಎ(ನ್ಯಾಷನಲ್ ಡಿಫೆನ್ಸ್ ಅಕಾಡೆಮಿ): ಯುಪಿಎಸ್ಸಿ ಎನ್ಡಿಎ ಪರೀಕ್ಷೆ ನಡೆಸುತ್ತದೆ. ದೇಶದ ಸೇನೆಯಲ್ಲಿ ಕಾರ್ಯ ನಿರ್ವಹಿಸುವ ಇಚ್ಛೆ ಹೊಂದಿರುವ ಅಭ್ಯರ್ಥಿಗಳು ಎನ್ಡಿಎ ಮತ್ತು ನಾವಲ್ ಅಕಾಡೆಮಿ ಪರೀಕ್ಷೆ ಎದುರಿಸುತ್ತಾರೆ. ಈ ಪರೀಕ್ಷೆಯನ್ನು ಪ್ರತೀ ವರ್ಷ 3 ಲಕ್ಷ ಮಂದಿ ಎದುರಿಸಿದರೂ ಇದನ್ನು ಪಾಸ್ ಮಾಡುವವರ ಸಂಖ್ಯೆ 0.1ರಷ್ಟಿದೆ. ಎನ್ಡಿಎ ಸ್ಪರ್ಧಾತ್ಮಕ ಪರೀಕ್ಷೆಯ ಜತೆಗೆ ದೈಹಿಕ ಸಹಿಷ್ಣುತೆ ಪರೀಕ್ಷೆಯನ್ನೂ ಅಭ್ಯರ್ಥಿಗಳು ಎದುರಿಸಬೇಕಿದೆ.
ಯುಜಿಸಿ ನೆಟ್(ಯುಜಿಸಿ ನ್ಯಾಷನಲ್ ಎಲಿಜಬಿಲಿಟಿ ಟೆಸ್ಟ್): ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಈ ಪರೀಕ್ಷೆ ನಡೆಸುತ್ತದೆ. ಯುಜಿಸಿ ಪರವಾಗಿ ವರ್ಷದಲ್ಲಿ ಎರಡು ಬಾರಿ ಎನ್ಇಟಿ ಈ ಪರೀಕ್ಷೆ ಆಯೋಜಿಸುತ್ತದೆ. ಜೆಆರ್ಎಫ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಪೋಸ್ಟ್ ಅರ್ಹತೆಗೆ ಈ ಪರೀಕ್ಷೆ ಅಗತ್ಯವಾಗಿದೆ. ಪ್ರತೀ ವರ್ಷ 5 ಲಕ್ಷ ಮಂದಿ ಪರೀಕ್ಷೆ ಎದುರಿಸಿದರೂ ಶೇ.9ರಷ್ಟು ಮಂದಿ ಮಾತ್ರ ಅರ್ಹತೆ ಪಡೆಯುತ್ತಾರೆ.
ಇದನ್ನೂ ಓದಿ: ದೇಶಾದ್ಯಂತ ನೇಮಕಾತಿಯಲ್ಲಿ ಶೇ 3ರಷ್ಟು ಹೆಚ್ಚಳ; ವೈಟ್-ಕಾಲರ್ ಗಿಗ್ ಉದ್ಯೋಗದಲ್ಲಿ 184ರಷ್ಟು ಏರಿಕೆ