ಬೆಂಗಳೂರು: ದ್ವಿತೀಯ ಪಿಯುಸಿ ಬಳಿಕ ಆರ್ಕಿಟೆಕ್ಚರ್ (ವಾಸ್ತುಶಿಲ್ಪ) ಕೋರ್ಸ್ ಸೇರ ಬಯಸುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುಡ್ ನ್ಯೂಸ್ ನೀಡಿದೆ. ಆರ್ಕಿಟೆಕ್ಚರ್ ಕೋರ್ಸ್ ಪ್ರವೇಶಾತಿಗೆ ದ್ವಿತೀಯ ಪಿಯುಸಿಯ ಅರ್ಹತಾ ಅಂಕಗಳನ್ನು ಶೇ 50ರಿಂದ ಶೇ 45ರಷ್ಟು ಅಂಕಗಳಿಗೆ ಇಳಿಸಿದ್ದು, ಈ ಕೋರ್ಸ್ ಸೇರ ಬಯಸುವ ಅರ್ಹರಿಗೆ ಯುಜಿಸಿಇಟಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜುಲೈ 13ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಸಂಬಂಧ ಕೆಇಎಗೆ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ಪತ್ರ ಬರೆದಿತ್ತು. ಪತ್ರದಲ್ಲಿ ಅರ್ಹತಾ ಅಂಕಗಳನ್ನು ಕಡಿಮೆ ಮಾಡಲಾಗಿದ್ದು, ದ್ವಿತೀಯ ಪಿಯುಸಿಯಲ್ಲಿ ಶೇ 45ರಷ್ಟು ಅಂಕ ಪಡೆದ, ನಾಟಾ (ನ್ಯಾಷನಲ್ ಆಪ್ಟಿಡ್ಯೂಡ್ ಟೆಸ್ಟ್ ಇನ್ ಅರ್ಕಿಟೆಕ್ಚರ್) ಪರೀಕ್ಷೆಯಲ್ಲಿ ಅರ್ಹರಾದವರಿಗೆ ಅರ್ಜಿ ಸಲ್ಲಿಸಲು ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಹೊಸದಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜುಲೈ 15ರೊಳಗೆ ನಾಟಾ ಅಂಕಗಳ ವಿವರ ಮತ್ತು ಅರ್ಜಿ ಪ್ರತಿಯನ್ನು ಕೆಇಎಗೆ ಸಲ್ಲಿಸಬೇಕು. ಜುಲೈ 8ರೊಳಗೆ ನಾಟಾ ಅರ್ಹತೆ ಪಡೆದವರು ಕೂಡ ಈ ದಿನಾಂಕದೊಳಗೆ ಅಂಕಗಳ ಮಾಹಿತಿ ನೀಡಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆರ್ಕಿಟೆಕ್ಚರ್ ಕೋರ್ಸಿಗೆ ಪ್ರವೇಶ ಪಡೆಯಲು ಆನ್‌ಲೈನ್ ಮೂಲಕ ನೋಂದಣಿ ಮಾಡಿ ಅರ್ಜಿ ಸಲ್ಲಿಸುವುದು ಕಡ್ಡಾಯ ಎಂದು ಮಾಹಿತಿ ನೀಡಿದ್ದಾರೆ.