ಜೋಧ್ಪುರ್: ಜೋಧ್ಪುರದ ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ (IIT) ಮುಂಬರುವ ಶೈಕ್ಷಣಿಕ ವರ್ಷದಿಂದ ಬಿ.ಟೆಕ್ ಪ್ರಥಮ ವರ್ಷದ ವಿದ್ಯಾರ್ಥಿಗಳು ಇಂಗ್ಲಿಷ್ ಜೊತೆಗೆ ಹಿಂದಿ ಭಾಷೆಯಲ್ಲಿ ಕಲಿಯಲು ಅವಕಾಶ ನೀಡಿದೆ. ಈ ಕುರಿತ ಪ್ರಸ್ತಾವನೆಯನ್ನು ಸೆನೆಟ್ನ 38ನೇ ಸಭೆಯಲ್ಲಿ ಮಂಡಿಸಲಾಗಿತ್ತು. ಈ ಪ್ರಸ್ತಾವನೆಗೆ ಮಂಡಳಿ ಸದಸ್ಯರು ಜೂನ್ 28ಕ್ಕೆ ಸಮ್ಮತಿ ಸೂಚಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಅನುಗುಣವಾಗಿ ತರಗತಿ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಿರ್ದೇಶಕ ಪ್ರೊ.ಅವಿನಾಶ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ. ಇದೀಗ ಮೊದಲ ವರ್ಷದ ವಿದ್ಯಾರ್ಥಿಗಳು ಹಿಂದಿ ಮತ್ತು ಇಂಗ್ಲಿಷ್ನಲ್ಲೂ ಕಲಿಯುವ ಅವಕಾಶ ಪಡೆಯಲಿದ್ದಾರೆ. ಇದರಿಂದ ಅವರಿಗೆ ವಿಷಯವನ್ನು ತಮ್ಮ ಭಾಷೆಯಲ್ಲಿಯೇ ಸುಲಭ ಮತ್ತು ಆಳವಾಗಿ ಕಲಿಯುವ ಅವಕಾಶ ಸಿಗುತ್ತದೆ ಎಂದಿದ್ದಾರೆ.
ಈ ಕಲಿಕೆಗಾಗಿ ತರಗತಿಯನ್ನು ಎರಡು ವಿಭಾಗಗಳನ್ನು ಮಾಡಲಾಗಿದೆ. ಒಂದು ಇಂಗ್ಲಿಷ್ ಮತ್ತೊಂದು ಹಿಂದಿ. ಎರಡು ವಿಭಾಗಗಳಿಗೂ ಅದೇ ವಿಷಯವನ್ನು ಶಿಕ್ಷಕರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಕಲಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಗೆ ಅನುಗುಣವಾಗಿ ವಿಭಾಗದ ಆಯ್ಕೆಗೆ ಅವಕಾಶ ನೀಡಲಾಗಿದೆ. ಅಲ್ಲದೇ, ಅವಶ್ಯಕತೆ ಇದಲ್ಲಿ ಸೆಷನ್ ಮಧ್ಯೆ ಅವರು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಬದಲಾವಣೆ ಕೂಡ ಮಾಡಬಹುದು.