ಹೈದರಾಬಾದ್: ಜೊಮಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಮೆಕ್ಸಿಕೊದ ಮಾಡೆಲ್ ಮತ್ತು ಉದ್ಯಮಿ ಗ್ರೇಸಿಯ ಮುನೊಜ್ ಅವರನ್ನು ಮದುವೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ತಿಂಗಳ ಹಿಂದೆಯೇ ಅವರ ಮದುವೆಯಾಗಿದ್ದು, ಇದನ್ನು ಅವರು ಬಹಿರಂಗ ಪಡಿಸಿರಲಿಲ್ಲ. ಇದೀಗ ಗ್ರೇಸಿಯಾ ಅವರ ಸಾಮಾಜಿಕ ಜಾಲತಾಣದಲ್ಲಿ ಬಯೋ ಬದಲಾದ ಹಿನ್ನೆಲೆ ಅವರ ಮದುವೆ ಸುದ್ದಿ ಹೊರ ಬಿದ್ದಿದೆ. ದೀಪಿಂದರ್ ಗೋಯಲ್ ಇದಕ್ಕೂ ಮೊದಲು ಕಂಚನಾ ಜೋಶಿ ಎನ್ನುವವರನ್ನು ಮದುವೆಯಾಗಿದ್ದರು. ಇದೀಗ ಮೆಕ್ಸಿಕೊದ ರೂಪದರ್ಶಿಯನ್ನು ಎರಡನೇ ಮದುವೆಯಾಗಿದ್ದಾರೆ.
ರಹಸ್ಯ ಮದುವೆ: ದೀಪಿಂದರ್ ಐಐಟಿಯಲ್ಲಿ ಓದುವಾಗಲೇ ಕಂಚನಾ ಎಂಬುವರನ್ನು ಮದುವೆಯಾಗಿದ್ದು, ಪ್ರತ್ಯೇಕಗೊಂಡಿದ್ದರು. ಇದೀಗ ಎರಡನೇ ಮದುವೆಯನ್ನು ಗೌಪ್ಯವಾಗಿ ಆಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಿಂದ ಈ ಮಾಹಿತಿ ಬಹಿರಂಗವಾಗಿದೆ.
ಯಾರು ಈ ಗ್ರೇಸಿಯಾ: ಅವರ ಸಾಮಾಜಿಕ ಜಾಲತಾಣದ ಬಯೋ ಅನುಸಾರ ಗ್ರೆಸಿಯಾ ಮೆಕ್ಸಿಕೊದಲ್ಲಿ ಹುಟ್ಟಿದ್ದಾರೆ. ರೂಪದರ್ಶಿಯಾಗಿರುವ ಅವರು, 2022ರ ಮೆಟ್ರೊಪಾಲಿಟನ್ ಫ್ಯಾಷನ್ ವೀಕ್ನ ವಿನ್ನರ್ ಆಗಿದ್ದಾರೆ. ಬಳಿಕ ಮಾಡೆಲಿಂಗ್ ತೊರೆದು ಸ್ಟಾರ್ಟ್ ಅಪ್ ಆರಂಭಿಸಿದ್ದು, ಸದ್ಯ ಅವರು ಇದೇ ವೃತ್ತಿ ಮುಂದುವರೆಸಿದ್ದಾರೆ.
ಸದ್ಯ ಗ್ರೇಸಿಯಾ ಭಾರತದಲ್ಲಿದ್ದು, ದೆಹಲಿಗೆ ಆಗಮಿಸಿದ್ದು, ಕೆಲವು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದು, ಈ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ, ಅವರು ನನ್ನ ಹೊಸ ಮನೆ, ನನ್ನ ಹೊಸ ಜೀವನ ಎಂದು ಬರೆದುಕೊಂಡಿದ್ದಾರೆ.
ಜೊಮಾಟೊ ಸಂಸ್ಥಾಪಕ: ಐಐಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿದ ದೀಪಿಂದರ್ ಕನ್ಸಲ್ಟಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ 2008ರಲ್ಲಿ ಗುರುಗ್ರಾಮ್, ಹರ್ಯಾಣ,ದಲ್ಲಿ ಜೊಮೊಟೊವನ್ನು ಆರಂಭಿಸಿದರು. ಇಂದು ಜೊಮಾಟೊ ದೇಶದೆಲ್ಲೆಡೆ ಸಾವಿರಾರು ನಗರದಲ್ಲಿ ಸೇವೆ ಒದಗಿಸುತ್ತಿದೆ.
ಶುದ್ದ ಸಸ್ಯಹಾರಿ ಫ್ಲೀಟ್: ಜೊಮಾಟೊ ಇತ್ತೀಚಿಗೆ ಸಸ್ಯಾಹಾರಿಗಳಿಗೆ ವಿಶೇಷ ಸೇವೆ ನೀಡುವ ಉದ್ದೇಶ 'ಪ್ಯೂರ್ ವೆಜ್ ಮೋಡ್' ಹಾಗೂ 'ಪ್ಯೂರ್ ವೆಜ್ ಫ್ಲೀಟ್' ಪರಿಚಯಿಸಿತ್ತು. ಮಾಂಸಾಹಾರ ಮತ್ತು ಸಸ್ಯಾಹಾರದ ಬಾಕ್ಸ್ಗಳನ್ನು ಒಟ್ಟಿಗೆ ಕೊಂಡೊಯ್ಯುವಾಗ ವಾಸನೆಗಳ ಸಮಸ್ಯೆಗಳು ಎದುರಾಗುತ್ತಿತ್ತು. ಈ ಕಾರಣದಿಂದ ನಾವು ಪ್ಯೂರ್ ವೆಜ್ ಫ್ಲೀಟ್ ಪರಿಚಯಿಸಿ, ಸಸ್ಯಾಹಾರವನ್ನು ಪ್ರತ್ಯೇಕವಾಗಿ ಡೆಲಿವರಿ ಮಾಡುವ ನಿರ್ಧಾರ ಕೈಗೊಂಡೆವು ಎಂದು ದೀಪಿಂದರ್ ತಿಳಿಸಿದ್ದರು. ಅಲ್ಲದೇ ಇದಕ್ಕಾಗಿ ಡೆಲಿವರಿ ಪಾರ್ಟನರ್ಗಳಿಗೆ ಹಸಿರು ಬಣ್ಣದ ಉಡುಗೆ ಪರಿಚಯಿಸಿದೆ. ಹಸಿರು ಬಣ್ಣದಲ್ಲಿ ಡಬ್ಬದಲ್ಲಿ ಸಸ್ಯಹಾರ ಮತ್ತು ಕೆಂಪು ಬಣ್ಣದಲ್ಲಿ ಮಾಂಸಾಹಾರ ಸೇವೆಗೆ ಮುಂದಾಯಿತು. ಈ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾದ ಹಿನ್ನೆಲೆ ಹಸಿರು ಬಣ್ಣದ ಉಡುಗೆಯನ್ನು ಹಿಂಪಡೆಯಲಾಯಿತು.
ಇದನ್ನೂ ಓದಿ: ಜೊಮಾಟೊ 'ಶುದ್ಧ ಸಸ್ಯಾಹಾರ ಮೋಡ್'ಗೆ ಪರ-ವಿರೋಧ ಪ್ರತಿಕ್ರಿಯೆ: Zomato ಸಿಇಒ ಹೇಳಿದ್ದೇನು?