ನವದೆಹಲಿ: ಶ್ರೀಲಂಕಾ ಮತ್ತು ಮಾರಿಷಸ್ ದೇಶಗಳಲ್ಲಿ ಭಾರತ ಅಭಿವೃದ್ಧಿಪಡಿಸಿದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ತಂತ್ರಜ್ಞಾನವನ್ನು ಇಂದಿನಿಂದ ಜಾರಿಗೊಳಿಸಲಾಗಿದೆ. ಫ್ರಾನ್ಸ್‌ನಲ್ಲಿ ಆರಂಭವಾದ ಒಂದು ವಾರದ ನಂತರ ಈಗ ಈ ಎರಡು ದೇಶಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ಜಾರಿಗೆ ಬಂದಿದೆ. ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಮತ್ತು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರೊಂದಿಗೆ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರು. ಮಾರಿಷಸ್ ನಲ್ಲಿ ಇಂದು ರುಪೇ ಕಾರ್ಡ್ಗಳನ್ನು ಸಹ ಪರಿಚಯಿಸಲಾಯಿತು.
"ಶ್ರೀಲಂಕಾ ಮತ್ತು ಮಾರಿಷಸ್ನೊಂದಿಗೆ ಭಾರತದ ದೃಢವಾದ ಸಾಂಸ್ಕೃತಿಕ ಸಂಬಂಧ ಮತ್ತು ಜನರ ನಡುವಿನ ಸಂಪರ್ಕವನ್ನು ಗಮನಿಸಿದರೆ, ಯುಪಿಐ ವ್ಯವಸ್ಥೆಯು ವೇಗದ ಮತ್ತು ತಡೆರಹಿತ ಡಿಜಿಟಲ್ ವಹಿವಾಟಿನ ಅನುಭವದ ಮೂಲಕ ಜನರಿಗೆ ಪ್ರಯೋಜನ ನೀಡಲಿದೆ ಮತ್ತು ದೇಶಗಳ ನಡುವೆ ಡಿಜಿಟಲ್ ಸಂಪರ್ಕವನ್ನು ಹೆಚ್ಚಿಸಲಿದೆ" ಎಂದು ನರೇಂದ್ರ ಮೋದಿ ಅವರ ಕಚೇರಿ ತಿಳಿಸಿದೆ.
ಅನುಕೂಲವೇನು?: ಉಭಯ ದೇಶಗಳಿಗೆ ಭೇಟಿ ನೀಡುವ ಭಾರತೀಯರು ಆ ದೇಶಗಳಲ್ಲಿ ಯುಪಿಐ ಬಳಸಿ ಪಾವತಿ ಮಾಡಲು ಸಾಧ್ಯವಾಗಲಿದೆ ಮತ್ತು ಅದೇ ರೀತಿ ಭಾರತಕ್ಕೆ ಬರುವ ಮಾರಿಷಸ್ ಜನತೆ ಸಹ ಇದನ್ನು ಬಳಸಲು ಸಾಧ್ಯವಾಗಲಿದೆ. ರುಪೇ ಸೇವೆಗಳ ವಿಸ್ತರಣೆಯು ಮಾರಿಷಸ್ ಬ್ಯಾಂಕುಗಳಿಗೆ ರುಪೇ ಕಾರ್ಡ್ ಗಳನ್ನು ವಿತರಿಸಲು ಮತ್ತು ಅವುಗಳನ್ನು ಭಾರತ ಮತ್ತು ಮಾರಿಷಸ್ ಎರಡರಲ್ಲೂ ವ್ಯಾಪಾರಗಳಲ್ಲಿ ಬಳಸಲು ಅನುವು ಮಾಡಿಕೊಡುತ್ತದೆ.