ನವದೆಹಲಿ: ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ವಾಹನಗಳಾದ ನೆಕ್ಸಾನ್.ಇವಿ ಮತ್ತು ಟಿಯಾಗೊ.ಇವಿ ಕಾರುಗಳ ಬೆಲೆಯನ್ನು 1.2 ಲಕ್ಷ ರೂ.ಗಳವರೆಗೆ ಕಡಿತಗೊಳಿಸಿದೆ. ನೆಕ್ಸಾನ್.ಇವಿ ಬೆಲೆಯನ್ನು 1.2 ಲಕ್ಷ ರೂ.ಗಳವರೆಗೆ ಕಡಿತಗೊಳಿಸಲಾಗಿದ್ದು, ಈಗ ಈ ಮಾಡೆಲ್ 14.49 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ಹಾಗೆಯೇ ಟಿಯಾಗೊ.ಇವಿ ಬೆಲೆಯನ್ನು 70,000 ರೂ.ಗಳವರೆಗೆ ಕಡಿಮೆ ಮಾಡಲಾಗಿದ್ದು, ಈ ಮಾಡೆಲ್ ಈಗ 7.99 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ ಸಿಗಲಿದೆ ಎಂದು ಟಾಟಾ ಮೋಟಾರ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಬ್ಯಾಟರಿಗಳ ವೆಚ್ಚ ಕಡಿಮೆಯಾದ ಹಿನ್ನೆಲೆಯಲ್ಲಿ ಕಂಪನಿ ಕಾರುಗಳ ಬೆಲೆ ಕಡಿಮೆ ಮಾಡಿದೆ.
"ಬ್ಯಾಟರಿ ವೆಚ್ಚವು ಇವಿಯ ಒಟ್ಟಾರೆ ವೆಚ್ಚದ ಗಣನೀಯ ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಟರಿ ಸೆಲ್ ಬೆಲೆಗಳು ಕಡಿಮೆಯಾಗಿರುವುದರಿಂದ ಮತ್ತು ಭವಿಷ್ಯದಲ್ಲಿ ಅವುಗಳ ಬೆಲೆ ಇನ್ನಷ್ಟು ಕಡಿಮೆಯಾಗಬಹುದು ಎಂಬುದನ್ನು ಪರಿಗಣಿಸಿ ಈ ಪ್ರಯೋಜನಗಳನ್ನು ನಾವು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿದ್ದೇವೆ" ಎಂದು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ (ಟಿಪಿಇಎಂ) ವಿಭಾಗದ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಹೇಳಿದರು.
ಕಳೆದ ಕೆಲವು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ವೇಗವಾಗಿ ಬೆಳೆದಿದ್ದರೂ, ದೇಶದ ಜನತೆ ಎಲೆಕ್ಟ್ರಿಕ್ ವಾಹನಗಳನ್ನೇ ಹೆಚ್ಚಾಗಿ ಬಳಸುವಂತೆ ಮಾಡುವುದು ಕಂಪನಿಯ ಧ್ಯೇಯವಾಗಿದೆ ಎಂದು ಅವರು ಹೇಳಿದರು. ಎಲೆಕ್ಟ್ರಿಕ್ ವಾಹನಗಳ ಮಾರಾಟದ ಬೆಳವಣಿಗೆ ವೇಗವಾಗಿದೆ ಮತ್ತು ಒಟ್ಟಾರೆ ಪ್ರಯಾಣಿಕ ವಾಹನ ಉದ್ಯಮದ ಬೆಳವಣಿಗೆಯನ್ನು ಗಣನೀಯವಾಗಿ ವಿಸ್ತರಿಸುತ್ತಿವೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.