ಚೆನ್ನೈ: ತಮಿಳುನಾಡಿನ ಹೊಸೂರಿನಲ್ಲಿ 2,000 ಎಕರೆ ಪ್ರದೇಶದಲ್ಲಿ ವರ್ಷಕ್ಕೆ 30 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಬಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗುರುವಾರ ಹೇಳಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಹೊಸ ಯೋಜನೆಯನ್ನು ಘೋಷಿಸಿದ ಸ್ಟಾಲಿನ್, ವಿಮಾನ ನಿಲ್ದಾಣವು ಹೊಸೂರು ಮಾತ್ರವಲ್ಲದೆ ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೂ ಸಹಾಯಕವಾಗಲಿದೆ ಎಂದರು.
ಹೊಸೂರು ಆಯ್ಕೆ ಏಕೆ?: ಹೊಸೂರನ್ನು ಪ್ರಮುಖ ಆರ್ಥಿಕ ಬೆಳವಣಿಗೆಯ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಬಯಸಿದೆ. ಅಲ್ಲಿ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಅಲ್ಲದೆ ಹೊಸೂರಿಗೆ ಮಾಸ್ಟರ್ ಪ್ಲಾನ್ ಅಂತಿಮಗೊಳಿಸಲಾಗುತ್ತಿದೆ ಎಂದು ಸ್ಟಾಲಿನ್ ತಿಳಿಸಿದರು. ಹೊಸೂರು ಕಳೆದ ಕೆಲ ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಹೂಡಿಕೆಗಳನ್ನು ಆಕರ್ಷಿಸುತ್ತಿದೆ ಎಂದು ಅವರು ಹೇಳಿದರು.
ಈ ಘೋಷಣೆಯನ್ನು ಸ್ವಾಗತಿಸಿದ ರಾಜ್ಯ ಕೈಗಾರಿಕೆ ಮತ್ತು ಹೂಡಿಕೆ ಸಚಿವ ಟಿ.ಆರ್.ಬಿ.ರಾಜಾ, "ಹೊಸೂರಿನಲ್ಲಿ ಹೊಸ ವಿಮಾನ ನಿಲ್ದಾಣದ ಘೋಷಣೆಯು ಈ ಪ್ರದೇಶಕ್ಕೆ ಒಂದು ಮಹತ್ವದ ಕೊಡುಗೆಯಾಗಿದೆ. ಈ ಯೋಜನೆಯು ಸಂಪರ್ಕವನ್ನು ಹೆಚ್ಚಿಸಲಿದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲಿದೆ. ಇದು ಹೊಸೂರಿಗೆ ಮಾತ್ರವಲ್ಲದೆ ನೆರೆಯ ಜಿಲ್ಲೆಗಳಾದ ಧರ್ಮಪುರಿ ಮತ್ತು ಸೇಲಂ ಜಿಲ್ಲೆಗಳಿಗೆ ಅನುಕೂಲಕರವಾಗಲಿದೆ. ಜೊತೆಗೆ ಬೆಂಗಳೂರಿನ ವಿವಿಧ ಭಾಗಗಳಿಗೆ ಕೂಡ ಉಪಯುಕ್ತವಾಗಲಿದೆ" ಎಂದರು.