ಪಾಟ್ನಾ, ಬಿಹಾರ: ಯಶಸ್ಸು ನಿಮ್ಮ ಮನೆ ಬಾಗಿಲಿಗೆ ಹೇಗೆ ಮತ್ತು ಯಾವಾಗ ಬರುತ್ತದೆ ಎಂಬುದನ್ನು ನೀವು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ ಬಿಡಿ. ಏಕೆಂದರೆ ಶಿಸ್ತು ಮತ್ತು ಸಂಯಮದಿಂದ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಿಕ್ಕ ಅವಕಾಶವನ್ನು ನಿಮ್ಮದನ್ನಾಗಿ ಮಾಡಿಕೊಳ್ಳುವ ಮೂಲಕ ಅದನ್ನು ಯಶಸ್ಸಾಗಿ ಪರಿವರ್ತಿಸಬಹುದು. ಇದೇ ಕಥೆ ಭಾರತದ ಹಿರಿಯ ಕೈಗಾರಿಕೋದ್ಯಮಿ ರವೀಂದ್ರ ಕಿಶೋರ್ ಸಿನ್ಹಾ ಅವರದ್ದು. ಏನನ್ನೋ ಕಳೆದುಕೊಂಡು ಖಿನ್ನತೆಗೆ ಒಳಗಾಗುವ ಯುವಕರಿಗೆ ಈ ಕಥೆ ಸ್ಫೂರ್ತಿಯ ಮೂಲವೇ ಸರಿ.
ಹುಟ್ಟೂರೇ ಇವರ ಕೆಲಸದ ಸ್ಥಳ:ರವೀಂದ್ರ ಕಿಶೋರ್ ಸಿನ್ಹಾ ಅವರು ವೃತ್ತಿಯಲ್ಲಿ ಪತ್ರಕರ್ತರಾಗಿದ್ದರು. 22 ಸೆಪ್ಟೆಂಬರ್ 1951 ರಂದು ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಜನಿಸಿದ ಇವರು, ಬಳಿಕ ತಂದೆಯ ಕೆಲಸದ ಹಿನ್ನೆಲೆಯಲ್ಲಿ ಪಾಟ್ನಾಗೆ ಬಂದರು. ವಿದ್ಯಾಭ್ಯಾಸ ಮುಗಿಸಿ ಪತ್ರಿಕೆಯೊಂದನ್ನು ಸೇರಿದರು. ಆ ಸಮಯದಲ್ಲಿ ಅವರು ಬಿಹಾರದ ಪ್ರಮುಖ ಪತ್ರಿಕೆ ಸರ್ಚ್ ಲೈಟ್ ಪ್ರದೀಪ್‌ನಲ್ಲಿ ಯುದ್ಧದ ವರದಿಗಾರರಾಗಿ ಸೇರ್ಪಡೆಗೊಂಡಿದ್ದರು.
ಒಂದೊಮ್ಮೆ ಕೆಲಸದಿಂದ ವಜಾ, ಈಗ ಕೋಟಿಗಟ್ಟಲೆ ಒಡೆಯ: 1971ರಲ್ಲಿ ಭಾರತ - ಪಾಕಿಸ್ತಾನದ ನಡುವೆ ನಡೆದ ಯುದ್ಧದ ವರದಿ ಮಾಡಿ ಸತ್ಯವನ್ನು ಅರಿತುಕೊಂಡರು. ಅಲ್ಲಿಂದಲೇ ರವೀಂದ್ರ ಕಿಶೋರ್ ಸಿನ್ಹಾ ಅವರ ಜೀವನದಲ್ಲಿ ಹಲವು ಬದಲಾವಣೆಗಳಾಗತೊಡಗಿದವು. ಯುದ್ಧದ ಬಳಿಕ ಅವರನ್ನು ಕೆಲಸದಿಂದ ವಜಾ ಮಾಡಲಾಯಿತು. ಅಂತಹ ಪರಿಸ್ಥಿತಿಯಲ್ಲಿ, ಅವರು ನಿವೃತ್ತ ಸೇನಾ ಸಿಬ್ಬಂದಿಯೊಂದಿಗೆ SIS ಕಂಪನಿಯೊಂದನ್ನು ಸ್ಥಾಪಿಸಿದರು ಮತ್ತು ಈ ಕಂಪನಿಯು ಈಗ ಭಾರತದ ಅತಿದೊಡ್ಡ ಭದ್ರತಾ ಕಂಪನಿಯಾಗಿ ಬೆಳೆದು ನಿಂತಿದೆ.
ಅನೇಕ ರಾಜ್ಯ ಮತ್ತು ದೇಶಗಳಲ್ಲಿ ಕಂಪನಿಯ ಶಾಖೆಗಳ ಸ್ಥಾಪನೆ: ದೈತ್ಯವಾಗಿ ಬೆಳೆದು ನಿಂತ ಕಂಪನಿಯಲ್ಲಿ ಸಾವಿರಾರು ಶಾಖೆಗಳಿದ್ದು, ಅನೇಕ ದೇಶಗಳಲ್ಲಿ ಹರಡಿವೆ. ಇಂದಿನವರೆಗೆ, ಈ ಕಂಪನಿ ಅಡಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಪಡೆಯುತ್ತಿದ್ದಾರೆ ಮತ್ತು ಈ ಕಂಪನಿಯ 13000 ಕೋಟಿ ರೂ. ವಹಿವಾಟು ನಡೆಸುತ್ತಿದೆ. ರವೀಂದ್ರ ಕಿಶೋರ್ ಸಿನ್ಹಾ ಪತ್ರಕರ್ತರಾಗಿದ್ದರಿಂದ 1966ರಲ್ಲಿಯೇ ಭಾರತೀಯ ಜನಸಂಘಕ್ಕೆ ಸೇರಿದ್ದರು. ನಂತರ ಅವರು ಬಿಜೆಪಿಯ ಸ್ಥಾಪಕ ಸದಸ್ಯರೂ ಕೂಡಾ ಆದರು. ಬಿಜೆಪಿ ಅವರನ್ನು 2014 ರಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿತ್ತು ಕೂಡಾ.
ಬಿಹಾರದ ಉದ್ಯಮಿ ಆರ್ ಕೆ ಸಿನ್ಹಾ - ಪತ್ರಕರ್ತನಾಗಿ ಕೈಗಾರಿಕೋದ್ಯಮಿವರೆಗೆ: ಆರ್.ಕೆ.ಸಿನ್ಹಾ ತಮ್ಮ 'ಸರ್ಚ್‌ಲೈನ್ ಪ್ರದೀಪ್'ನಿಂದ ವಜಾಗೊಂಡ ಕಥೆ ಹೇಳುವುದು ಹೀಗೆ. ’’1971ರ ಭಾರತ-ಪಾಕ್ ಯುದ್ಧವನ್ನು ವರದಿ ಮಾಡಿ ಹಿಂದಿರುಗಿದ ನಂತರ ನಾನು ಇಂದಿರಾ ಗಾಂಧಿ ವಿರುದ್ಧ ಬರೆಯಲು ಪ್ರಾರಂಭಿಸಿದೆ. ಆಗ ಇಂದಿರಾಗಾಂಧಿ ಎಡಪಂಥೀಯರ ಒತ್ತಾಯಕ್ಕೆ ಮಣಿದು ಯಾವುದೇ ಹಿಂಜರಿಕೆಯಿಲ್ಲದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ನಾನು ಅದರ ವಿರುದ್ಧ ಬರೆಯುತ್ತಿದ್ದೆ. ಒಂದು ದಿನ ಸರ್ಚ್ ಲೈಟ್ ಮಾಲೀಕರು ನನ್ನನ್ನು ಹೋಟೆಲ್ ಮೌರ್ಯಕ್ಕೆ ಕರೆದರು. ನನ್ನ ಕೆಲಸವನ್ನೂ ಹೊಗಳಿದರು. ಆದರೆ ಮರುಗಳಿಗೆಯಲ್ಲೇ ಕೆಲಸದಿಂದ ವಜಾ ಮಾಡಿದರು. ಆಗ ನನ್ನ ತಿಂಗಳ ಸಂಬಳ 230 ರೂ.
ಈ ಪತ್ರಿಕೆ ಯಾರದ್ದು ಗೊತ್ತಾ?: “ಒಂದು ದಿನ ಕೆಕೆ ಬಿರ್ಲಾ ಕರೆ ಮಾಡಿದರು. ಅವರು ಸರ್ಚ್ ಲೈಟ್ ಪ್ರದೀಪ್ ಮಾಲೀಕರಾಗಿದ್ದರು. ಪಾಟ್ನಾದ ರಿಪಬ್ಲಿಕ್ ಹೋಟೆಲ್‌ನಲ್ಲಿ,ಕೆ.ಕೆ.ಬಿರ್ಲಾ ಅವರು, ನೀವು ತುಂಬಾ ಚೆನ್ನಾಗಿ ಬರೆಯುತ್ತೀರಿ, ಆದರೆ ನೀವು ಇಷ್ಟು ಕಟುವಾಗಿ ಬರೆದರೆ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿರುವ ನನ್ನ ಎಲ್ಲಾ ಸಕ್ಕರೆ ಕಾರ್ಖಾನೆಗಳು ಮುಚ್ಚಲ್ಪಡುತ್ತವೆ. ಸಾವಿರಾರು ಜನರು ನಿರುದ್ಯೋಗಿಗಳಾಗುತ್ತಾರೆ. ನಾವು ಪ್ರಕಟಿಸುವ ಈ ಪತ್ರಿಕೆ ಪತ್ರಿಕೋದ್ಯಮಕ್ಕಾಗಿ ಅಲ್ಲ. ಇದು ನನ್ನ ಸಂಪರ್ಕ, ಸರ್ಕಾರಿ ಅಧಿಕಾರಿಗಳಿಂದ ಕೆಲಸ ಮಾಡಲು. ಕಂಪನಿ ನಷ್ಟದಲ್ಲೇ ಸಾಗುತ್ತಿದೆ. ನನಗೆ ಇದರಲ್ಲಿ ಹೆಚ್ಚಿನ ಆಸಕ್ತಿ ಇಲ್ಲ." ಎಂದು ಬಿರ್ಲಾ ಹೇಳಿದ್ದರು ಎಂದು ಆರ್‌ಕೆ ಸಿನ್ಹಾ ನೆನಪಿಸಿಕೊಂಡರು.