ಮುಂಬೈ:ದೇಶೀಯ ಷೇರು ಮಾರುಕಟ್ಟೆ ಎರಡನೇ ದಿನವೂ ಭರ್ಜರಿ ಲಾಭ ಮಾಡಿಕೊಂಡಿದೆ. ಏಷ್ಯಾದ ಮಾರುಕಟ್ಟೆಯಲ್ಲಿನ ಬೆಳವಣಿಗೆ ಮತ್ತು ರಿಲಯನ್ಸ್ ಇಂಡಸ್ಟೀಸ್ನ ಷೇರುಗಳ ಖರೀದಿಯಲ್ಲಿ ಹೆಚ್ಚಳದಿಂದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಇದೇ ಮೊದಲ ಬಾರಿಗೆ ಗರಿಷ್ಠ ಮಟ್ಟಕ್ಕೆ ತಲುಪಿವೆ.
ಇಂದಿನ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 620.73 ಪಾಯಿಂಟ್ (ಶೇಕಡಾ 0.80 ರಷ್ಟು) ಏರಿಕೆ ಕಂಡು 78,674 ಅಂಕ ತಲುಪಿ ವಹಿವಾಟು ಮುಗಿಸಿತು. ಇದು ಮಾರುಕಟ್ಟೆ ಇತಿಹಾಸದಲ್ಲೇ ಅತ್ಯಧಿಕ ಏರಿಕೆಯಾಗಿದೆ. ಈ ಮೂಲಕ 79 ಸಾವಿರದ ಸಮೀಪಕ್ಕೆ ಬಂದು ನಿಂತಿದೆ. ದಿನದ ವಹಿವಾಟಿನ ಒಂದು ಹಂತದಲ್ಲಿ ಇದು 705.88 ಪಾಯಿಂಟ್ ಏರಿಕೆ ಕಂಡು 78,759.40ರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು.
50 ಷೇರುಗಳ ನಿಫ್ಟಿ ಸೂಚ್ಯಂಕವು 147.50 ಪಾಯಿಂಟ್ (ಶೇಕಡಾ 0.62 ರಷ್ಟು) ಏರಿಕೆಯಾಗಿ 23,868.80 ಅಂಕ ಗಳಿಸಿ ಹೊಸ ಅಧ್ಯಾಯ ಬರೆದಿದೆ. ಇಂಟ್ರಾ ಡೇ ಸೂಚ್ಯಂಕವು 168.6 ಪಾಯಿಂಟ್ ಏರಿಕೆಯಾಗಿ 23,889.90 ಅಂಕದೊಂದಿಗೆ ಗರಿಷ್ಠ ಮಟ್ಟಕ್ಕೆ ಬಂದು ನಿಂತಿದೆ.
ಇಂದಿನ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್‌ಟೆಲ್, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ, ಅದಾನಿ ಪೋರ್ಟ್ಸ್, ಆಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ ಮತ್ತು ಬಜಾಜ್ ಫೈನಾನ್ಸ್ ಕಂಪನಿಗಳ ಷೇರುಗಳು ಹೆಚ್ಚು ಲಾಭ ಗಳಿಸಿದವು. ಮಹೀಂದ್ರಾ ಅಂಡ್ ಮಹೀಂದ್ರಾ, ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ತುಸು ನಷ್ಟಕ್ಕೀಡಾದವು.