ಮುಂಬೈ:ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಭಾರಿ ಗೆಲುವು ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ನಂತರ ಬೆಂಚ್‌ಮಾರ್ಕ್ ಈಕ್ವಿಟಿ ಸೂಚ್ಯಂಕಗಳು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸುಮಾರು 4 ಪ್ರತಿಶತದಷ್ಟು ಏರಿಕೆ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್ ನ ಟಾಪ್ 30-ಷೇರುಗಳು ಆರಂಭಿಕ ವಹಿವಾಟಿನಲ್ಲಿ 2,777.58 ಪಾಯಿಂಟ್‌ಗಳು ಅಥವಾ 3.75 ಪ್ರತಿಶತದಷ್ಟು ಏರಿಕೆ ಕಾಣುವ ಮೂಲಕ 76,738.89 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಎನ್‌ಎಸ್‌ಇ ನಿಫ್ಟಿ 808 ಪಾಯಿಂಟ್‌ಗಳು ಅಥವಾ ಶೇಕಡಾ 3.58 ರಷ್ಟು ಏರಿಕೆ ಕಂಡು 23,338.70 ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ಶನಿವಾರ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ಅವರು, ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ದೊಡ್ಡ ಬಹುಮತ ಪಡೆಯುವ ನಿರೀಕ್ಷೆಗಳಿವೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಭಾರಿ ಉತ್ಸಾಹ ಕಂಡು ಬಂದಿದೆ. ಜೂನ್ 4 ರಂದು ಅಂದರೆ ನಾಳೆ ಮತ ಎಣಿಕೆ ನಡೆಯಲಿದೆ.
ಸೆನ್ಸೆಕ್ಸ್ ನ ಟಾಪ್ 30 ಕಂಪನಿಗಳ ಷೇರುಗಳು ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ. ಪವರ್ ಗ್ರಿಡ್, ಎನ್‌ಟಿಪಿಸಿ, ಲಾರ್ಸೆನ್ ಆಂಡ್ ಟೂಬ್ರೊ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ.( ಇದು ಆರಂಭಿಕ ವಹಿವಾಟಿನ ಮಾಹಿತಿ ಮಾತ್ರ)