ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆಯಲ್ಲಿ ಮಹಾಪತನ: ಹೂಡಿಕೆದಾರರಿಗೆ ₹10 ಲಕ್ಷ ಕೋಟಿ ಲಾಸ್! - Stock Market Crash - STOCK MARKET CRASH

ಭಾರತೀಯ ಷೇರು ಮಾರುಕಟ್ಟೆಗಳು ಇಂದು ತೀವ್ರ ಕುಸಿತ ಕಂಡಿವೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Oct 3, 2024, 6:01 PM IST

ಮುಂಬೈ: ಗುರುವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆ ತೀವ್ರ ಕುಸಿತ ಕಂಡಿದ್ದು, ಒಂದೇ ದಿನದಲ್ಲಿ ಹೂಡಿಕೆದಾರರು 10 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಬಿಎಸ್ಇ ಸೆನ್ಸೆಕ್ಸ್ 1,769.19 ಪಾಯಿಂಟ್ಸ್ ಅಥವಾ ಶೇಕಡಾ 2.10 ರಷ್ಟು ಕುಸಿದು 82,497.10 ರಲ್ಲಿ ಕೊನೆಗೊಂಡರೆ, ನಿಫ್ಟಿ 50 546.80 ಪಾಯಿಂಟ್ಸ್ ಅಥವಾ ಶೇಕಡಾ 2.12 ರಷ್ಟು ಕುಸಿದು 25,250.10 ರಲ್ಲಿ ಕೊನೆಗೊಂಡಿದೆ. ಮಾರುಕಟ್ಟೆಯು ಆರಂಭಿಕ ವಹಿವಾಟಿನಲ್ಲಿಯೇ ಕುಸಿತದೊಂದಿಗೆ ಪ್ರಾರಂಭವಾಯಿತು ಮತ್ತು ವಹಿವಾಟಿನುದ್ದಕ್ಕೂ ನಿರಂತರ ಮಾರಾಟದ ಒತ್ತಡವನ್ನು ಎದುರಿಸಿತು. ಈ ಮೂಲಕ ನಿಫ್ಟಿ ಸೂಚ್ಯಂಕ ಸತತ ನಾಲ್ಕನೇ ದಿನ ಇಳಿಕೆಯಾಗಿದೆ.

ವಲಯವಾರು ನೋಡುವುದಾದರೆ ರಿಯಾಲ್ಟಿ, ಆಟೋ, ಎನರ್ಜಿ ಮತ್ತು ಫೈನಾನ್ಷಿಯಲ್ ಷೇರುಗಳು ಶೇ 2.43ರಿಂದ ಶೇ.4.36ರಷ್ಟು ಕುಸಿತ ಕಂಡಿವೆ. ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕ ಶೇಕಡಾ 2.21 ರಷ್ಟು ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕ ಶೇಕಡಾ 1.96 ರಷ್ಟು ಕುಸಿದಿದೆ.

ಬಿಎಸ್ಇ ಎಂ-ಕ್ಯಾಪ್ ಪ್ರಕಾರ ಹೂಡಿಕೆದಾರರ ಸಂಪತ್ತು ಹಿಂದಿನ ವಹಿವಾಟಿನಲ್ಲಿ ದಾಖಲಾದ 474.86 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ 10.04 ಲಕ್ಷ ಕೋಟಿ ರೂ. ಕಡಿಮೆಯಾಗಿ 464.82 ಲಕ್ಷ ಕೋಟಿ ರೂ.ಗೆ ಇಳಿದಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್​ಐಎಲ್), ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಲಾರ್ಸನ್ ಆಂಡ್ ಟರ್ಬೊ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಟಾಟಾ ಮೋಟಾರ್ಸ್​ನಂಥ ಮುಂಚೂಣಿ ಷೇರುಗಳು ಇಂದು ಕುಸಿತಕ್ಕೆ ಹೆಚ್ಚಿನ ಕೊಡುಗೆ ನೀಡಿವೆ.

65 ಷೇರುಗಳು ಇಂದು 52 ವಾರಗಳ ಕನಿಷ್ಠ ಮಟ್ಟವನ್ನು ತಲುಪಿದವು. ಈಕ್ವಿಟಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್, ಆರ್ ಬಿಎಲ್ ಬ್ಯಾಂಕ್ ಮತ್ತು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್​ನಂತಹ ಬಿಎಸ್ಇ 500 ಷೇರುಗಳು ಕ್ರಮವಾಗಿ ಒಂದು ವರ್ಷದ ಕನಿಷ್ಠ ಮಟ್ಟವನ್ನು ತಲುಪಿದವು. 221 ಷೇರುಗಳು ಇಂದು ತಮ್ಮ ಒಂದು ವರ್ಷದ ಗರಿಷ್ಠ ಮಟ್ಟವನ್ನು ಮುಟ್ಟಿವೆ. 4,019 ಷೇರುಗಳ ಪೈಕಿ 2,981 ಷೇರುಗಳು ಕುಸಿದವು. 943 ಷೇರುಗಳು ಮಾತ್ರ ಏರಿಕೆ ಕಂಡರೆ, 95 ಷೇರುಗಳು ಬದಲಾಗದೆ ಉಳಿದವು.

ಅಸ್ಥಿರ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು ಮತ್ತು ದೇಶೀಯ ಇಕ್ವಿಟಿ ಮಾರುಕಟ್ಟೆಗಳಲ್ಲಿ ಶೇಕಡಾ 2 ಕ್ಕಿಂತ ಹೆಚ್ಚಿನ ಕುಸಿತದಿಂದಾಗಿ ರೂಪಾಯಿ ಗುರುವಾರ ಯುಎಸ್ ಡಾಲರ್ ವಿರುದ್ಧ 14 ಪೈಸೆ ಕುಸಿದು 83.96 ರಲ್ಲಿ (ತಾತ್ಕಾಲಿಕ) ಸ್ಥಿರವಾಯಿತು.

ಇದನ್ನೂ ಓದಿ: ಅಕಾಲಿಕ ಮಳೆಯಿಂದ ಉಪ್ಪು ಉತ್ಪಾದನೆ ಕುಂಠಿತ: ಬೆಲೆಯೇರಿಕೆಯ ಆತಂಕ - Salt production decline

ABOUT THE AUTHOR

...view details