ಸಿಯೋಲ್:ಇತ್ತೀಚಿನ ವರ್ಷದಲ್ಲಿ ದಕ್ಷಿಣ ಕೊರಿಯಾ ಸಂಸ್ಕೃತಿ ಜಗತ್ತಿನೆಲ್ಲೆಡೆ ಯುವ ಜನತೆಯನ್ನು ಆಕರ್ಷಿಸುತ್ತಿರುವುದು ಸುಳ್ಳಲ್ಲ. ದಕ್ಷಿಣ ಕೊರಿಯಾದ ತಾರೆಯರು, ಅಲ್ಲಿನ ಆಹಾರ ಅವರ ತ್ವಚೆಯ ಆರೈಕೆ ಉತ್ಪನ್ನಗಳು ಇದೀಗ ಸಾಕಷ್ಟು ಜನಪ್ರಿಯತೆ ಗಳಿಸುತ್ತವೆ. ಅದರಲ್ಲೂ ಇನ್ಸ್ಟಂಟ್ ನೂಡಲ್ಸ್ಗೆ ಬೇಡಿಕೆ ಹೆಚ್ಚಿದ್ದು, ಇದೇ ಮೊದಲ ಬಾರಿಗೆ ಕಳೆದ ತಿಂಗಳು ದಕ್ಷಿಣ ಕೊರಿಯಾ ನೂಡಲ್ಸ್ ರಫ್ತಿನಲ್ಲಿ 100 ಮಿಲಿಯನ್ ಡಾಲರ್ ವಹಿವಾಟು ನಡೆಸಿದ್ದು, ಇದು ಕೊರಿಯಾದ ಸಂಸ್ಕೃತಿ ಮತ್ತು ಆಹಾರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ದತ್ತಾಂಶ ತಿಳಿಸಿದೆ.
ಕೊರಿಯಾದ ಇನ್ಸ್ಟಂಟ್ ನೂಡಲ್ಸ್ ಅಥವಾ ರಾಮಿಯೋನ್ ಏಪ್ರಿಲ್ನಲ್ಲಿ 108.6 ಮಿಲಿಯನ್ ಡಾಲರ್ ವಹಿವಾಟು ನಡೆಸಿದೆ. ಅಂದರೆ ಕಳೆದ ವರ್ಷಕ್ಕಿಂತ ಇದರ ವಹಿವಾಟು 46.8ರಷ್ಟು ಹೆಚ್ಚಾಗಿದೆ. 2022ರ ಮೇಯಿಂದ ಈ ಆಹಾರದ ಬೇಡಿಕೆ ಹೆಚ್ಚುತ್ತಿದೆ ಎಂದು ಕೊರಿಯಾ ಗ್ರಾಹಕ ಸೇವೆ (ಕೆಸಿಎಸ್) ತಿಳಿಸಿದೆ.
ಮಾಸಿಕ ಅಂಕಿ ಅಂಶ ಆಧಾರದ ಮೇಲೆ ಇದೇ ಮೊದಲ ಬಾರಿಗೆ ಇದರ ಮಾರಾಟ 100 ಡಾಲರ್ ಮಿಲಿಯನ್ಗಿಂತಲೂ ಹೆಚ್ಚಾಗಿದೆ ಎಂದು ಯೊನ್ಹಾಪ್ ಸುದ್ದಿ ಸಂಸ್ಥೆ ತಿಳಿಸಿದೆ.
2015ರಿಂದಲೂ ರಾಮಿಯೋನ್ ನೂಡಲ್ಸ್ಗೆ ಬೇಡಿಕೆ ಹೆಚ್ಚಿದೆ. ಆದರೆ, ಇತ್ತೀಚಿನ ದಿನದಲ್ಲಿ ಕೊರಿಯನ್ ಸಿನಿಮಾ, ಡ್ರಾಮಾ ಮತ್ತು ಮ್ಯೂಸಿಕ್ಗಳು ಜನಪ್ರಿಯ ಪಡೆದಂತೆ ಆಹಾರ ಮಾರುಕಟ್ಟೆ ಕೂಡ ಈ ವರ್ಷ ಹೊಸ ದಾಖಲೆ ಸೃಷ್ಟಿಸುತ್ತಿದೆ. ಅಧಿಕ ಹಣದುಬ್ಬರ ಹಿನ್ನಲೆ ದೇಶದಲ್ಲಿ ಕೂಡ ಕೈಗೆಟುಕುವ ದರದ, ರೆಡಿ ಟು ಈಟ್ ಆಹಾರ ಉತ್ಪನ್ನಗಳು ದೊಡ್ಡ ಬೇಡಿಕೆ ಸೃಷ್ಟಿಸಿವೆ.