ನವದೆಹಲಿ: ಭಾರತದ ಷೇರು ಮಾರುಕಟ್ಟೆಗಳು ಸೋಮವಾರದ ವಹಿವಾಟಿನಲ್ಲಿ ಏರಿಕೆಯೊಂದಿಗೆ ಕೊನೆಗೊಂಡಿವೆ. 30 ಷೇರುಗಳ ಸೆನ್ಸೆಕ್ಸ್ 454 ಪಾಯಿಂಟ್ ಅಥವಾ ಶೇಕಡಾ 0.59 ರಷ್ಟು ಏರಿಕೆಯಾಗಿ 77,073.44 ರಲ್ಲಿ ಕೊನೆಗೊಂಡಿದೆ. ಸೂಚ್ಯಂಕವು ಇಂದು 76,584.84-77,318.94 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ಎನ್ಎಸ್ಇ ನಿಫ್ಟಿ 50 ಕೂಡ 141 ಪಾಯಿಂಟ್ಸ್ ಅಥವಾ ಶೇಕಡಾ 0.61 ರಷ್ಟು ಲಾಭದೊಂದಿಗೆ 23,344.75 ರಲ್ಲಿ ಕೊನೆಗೊಂಡಿತು. ನಿಫ್ಟಿ50 ದಿನದ ಗರಿಷ್ಠ 23,391.10 ಮತ್ತು ಕನಿಷ್ಠ 23,170.65 ರ ಮಧ್ಯೆ ವಹಿವಾಟು ನಡೆಸಿದೆ.
ನಿಫ್ಟಿ50 ಯಲ್ಲಿನ 50 ಘಟಕ ಷೇರುಗಳ ಪೈಕಿ 29 ಷೇರುಗಳು ಲಾಭದಲ್ಲಿ ಕೊನೆಗೊಂಡವು. ನಿಫ್ಟಿಯಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್, ವಿಪ್ರೋ, ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಎನ್ ಟಿಪಿಸಿ, ಎಸ್ ಬಿಐ, ಅದಾನಿ ಎಂಟರ್ ಪ್ರೈಸಸ್, ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಬಿಪಿಸಿಎಲ್ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ. ಎಸ್ಬಿಐ ಲೈಫ್, ಟ್ರೆಂಟ್, ಶ್ರೀರಾಮ್ ಫೈನಾನ್ಸ್ ಮತ್ತು ಅದಾನಿ ಪೋರ್ಟ್ಸ್ ಸೇರಿದಂತೆ 21 ಷೇರುಗಳು ಇಳಿಕೆಯೊಂದಿಗೆ ಕೊನೆಗೊಂಡರೆ, ಒಂದು ಷೇರು ಬದಲಾಗದೆ ಉಳಿದಿದೆ.
ವಿಶಾಲ ಮಾರುಕಟ್ಟೆಗಳಲ್ಲಿ, ನಿಫ್ಟಿ ಮಿಡ್ ಕ್ಯಾಪ್ 100 ಶೇಕಡಾ 0.91 ರಷ್ಟು ಏರಿಕೆಯಾಗಿ 55,106.20 ರಲ್ಲಿ ಕೊನೆಗೊಂಡರೆ, ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇಕಡಾ 1.09 ರಷ್ಟು ಲಾಭದೊಂದಿಗೆ 17,864.65 ಕ್ಕೆ ಕೊನೆಗೊಂಡಿದೆ.