ನವದೆಹಲಿ: ಬ್ಯಾಂಕಿಂಗ್ ಜಾಲದ ವಿಸ್ತರಣೆ ಯೋಜನೆಯ ಭಾಗವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶಾದ್ಯಂತ 400 ಹೊಸ ಶಾಖೆಗಳನ್ನು ತೆರೆಯಲು ಯೋಜಿಸುತ್ತಿದೆ. ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಕಳೆದ ಹಣಕಾಸು ವರ್ಷದಲ್ಲಿ 137 ಹೊಸ ಶಾಖೆಗಳನ್ನು ತೆರೆದಿತ್ತು. ಇದರಲ್ಲಿ 59 ಶಾಖೆಗಳನ್ನು ಗ್ರಾಮೀಣ ಭಾಗದಲ್ಲಿ ಆರಂಭಿಸಲಾಗಿತ್ತು.
"ಶೇಕಡಾ 89ರಷ್ಟು ವಹಿವಾಟುಗಳು ಡಿಜಿಟಲ್ ಮೂಲಕ ಮತ್ತು ಶೇಕಡಾ 98 ರಷ್ಟು ವಹಿವಾಟುಗಳು ಶಾಖೆಯ ಹೊರಗೆ ನಡೆಯುತ್ತಿರುವ ಈ ಸಮಯದಲ್ಲಿ ಹೊಸ ಶಾಖೆಗಳ ಅಗತ್ಯವೇನು ಎಂದು ನನ್ನನ್ನು ಪ್ರಶ್ನಿಸಲಾಗಿತ್ತು. ಹೌದು.. ಹೊಸ ಶಾಖೆಗಳ ಅಗತ್ಯವಿದೆ ಎಂಬುದೇ ನನ್ನ ಉತ್ತರ. ಹಲವಾರು ಹೊಸ ವಿಷಯಗಳು ಹೊರಹೊಮ್ಮುತ್ತಿರುವುದರಿಂದ ಹೊಸ ಶಾಖೆಗಳು ಈಗಲೂ ಅಗತ್ಯವಾಗಿವೆ" ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖರಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಸಲಹೆ ಮತ್ತು ಹೂಡಿಕೆ ಸೇವೆಗಳಂತಹ ಕೆಲ ಸೇವೆಗಳನ್ನು ಶಾಖೆಯಿಂದ ಮಾತ್ರ ನೀಡಬಹುದು ಎಂದು ಅವರು ಹೇಳಿದರು. "ನಾವು ಹೊಸ ಶಾಖೆಗಳ ಅಗತ್ಯವಿರುವ ಸ್ಥಳಗಳನ್ನು ಗುರುತಿಸುತ್ತಿದ್ದೇವೆ ಮತ್ತು ಆ ಸ್ಥಳಗಳಲ್ಲಿ ಶಾಖೆಗಳನ್ನು ತೆರೆಯಲು ಯೋಜಿಸಿದ್ದೇವೆ. ಈ ವರ್ಷ ಸುಮಾರು 400 ಶಾಖೆಗಳನ್ನು ಆರಂಭಿಸಲು ನಾವು ಯೋಜಿಸಿದ್ದೇವೆ" ಎಂದು ಅವರು ಹೇಳಿದರು. ಮಾರ್ಚ್ 2024ರ ಹೊತ್ತಿಗೆ ಎಸ್‌ಬಿಐ ದೇಶಾದ್ಯಂತ 22,542 ಶಾಖೆಗಳ ಜಾಲವನ್ನು ಹೊಂದಿದೆ.