ಹೈದರಾಬಾದ್: ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ದರಗಳನ್ನು ವಿಧಿಸುವಲ್ಲಿ ಅನ್ಯಾಯದ ಅಭ್ಯಾಸಗಳನ್ನು ಅನುಸರಿಸುತ್ತಿರುವ ಬ್ಯಾಂಕುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸಾಲಗಾರರ ಮೇಲೆ ವಿಧಿಸಲಾದ ಹೆಚ್ಚುವರಿ ಬಡ್ಡಿಯನ್ನು ಮರು ಪಾವತಿಸುವಂತೆ ಬ್ಯಾಂಕ್‌ಗಳಿಗೆ ಸೋಮವಾರ ಸೂಚಿಸಲಾಗಿದೆ. 2003 ರಿಂದ RBI ಹಲವಾರು ಸಂದರ್ಭಗಳಲ್ಲಿ ತನ್ನ ನಿಯಂತ್ರಿತ ಘಟಕಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ.
'ಅನ್ಯಾಯದ ಮಾರ್ಗಗಳ ಅನುಸರಣೆಗೆ ಅಸಮಾಧಾನ: ಸಾಲದಾತರು ತನ್ನ ಗ್ರಾಹಕರ ಮೇಲೆ ನ್ಯಾಯಯುತ ಬಡ್ಡಿದರಗಳನ್ನು ಮಾತ್ರವೇ ವಿಧಿಸಬೇಕು. ಇದಕ್ಕಾಗಿ ಬ್ಯಾಂಕ್ಗಳು ನ್ಯಾಯಯುತ ಮತ್ತು ಪಾರದರ್ಶಕವಾಗಿರಬೇಕಾದ ಅಗತ್ಯವಿದೆ ಎಂದು ಆರ್‌ಬಿಐ ಹೊಸದಾಗಿ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಸೂಚಿಸಿದೆ. ಅದೇ ಸಮಯದಲ್ಲಿ ಸಾಲಗಳ ಬಡ್ಡಿದರ ನೀತಿಯ ಬಗ್ಗೆ ಸ್ವಾತಂತ್ರ್ಯವನ್ನೂ ನೀಡಿದೆ. ಮಾರ್ಚ್ 31, 2023 ಕ್ಕೆ ಕೊನೆಗೊಳ್ಳುವ ಅವಧಿಯ ಮಾರ್ಗಸೂಚಿಗಳ ಪಾಲನೆ ಬಗ್ಗೆ ಪರಿಶೀಲಿಸುವಾಗ, ಸಾಲದಾತರು ಕೆಲವು ಅನ್ಯಾಯದ ಅಭ್ಯಾಸಗಳನ್ನು ಅನುಸರಿಸುತ್ತಿದ್ದಾರೆ ಎಂದು RBI ಇತ್ತೀಚೆಗೆ ಕಂಡುಕೊಂಡಿತ್ತು.
ಮುಂಗಡ ಬಡ್ಡಿ ವಿಧಿಸುವುದರ ವಿರುದ್ಧ ಗರಂ: ಎಲ್ಲಾ ಆರ್‌ಇಗಳು ಸಾಲಗಳ ವಿತರಣೆ, ಬಡ್ಡಿ ಶುಲ್ಕಗಳು ಮತ್ತು ಇತರ ಶುಲ್ಕಗಳನ್ನು ಪರಿಶೀಲಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರ ಪ್ರಕಾರ, ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಬೇಕು ಮತ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು. RE( ರೆಗ್ಯುಲೆಟೆಡ್ ಎಂಟಿಟಿ) ಗಳ ಕ್ಷೇತ್ರ ಪರಿಶೀಲನೆಯ ಸಮಯದಲ್ಲಿ, ಸಾಲವನ್ನು ಮಂಜೂರು ಮಾಡಿದ ದಿನಾಂಕದಿಂದ ಅಥವಾ ಸಾಲದ ಒಪ್ಪಂದವನ್ನು ಕಾರ್ಯಗತಗೊಳಿಸಿದ ದಿನಾಂಕದಿಂದ ಬಡ್ಡಿ ವಿಧಿಸಲಾಗಿದೆ ಎಂದು ಗಮನಿಸಲಾಗಿದೆ. ವಾಸ್ತವವಾಗಿ ಅದನ್ನು ಸಾಲ ವಿತರಣೆಯ ದಿನಾಂಕದಿಂದ ಲೆಕ್ಕ ಹಾಕಬೇಕು. ಸಾಲ ಮಂಜೂರಾಗಿ ಹಲವು ದಿನ ಕಳೆದರೂ ಬಡ್ಡಿಯನ್ನು ಮುಂಗಡವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಅದು ಕಳವಳ ವ್ಯಕ್ತಪಡಿಸಿದೆ.