ಮುಂಬೈ: ಹಣದುಬ್ಬರದ ಸವಾಲುಗಳ ಮಧ್ಯೆ ಮತ್ತು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳ ನಂತರ ನಡೆಯಲಿರುವ ಮುಂಬರುವ ಹಣಕಾಸು ನೀತಿ ಪರಿಶೀಲನಾ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಬೆಂಚ್ ಮಾರ್ಕ್ ಬಡ್ಡಿದರವನ್ನು ಕಡಿತಗೊಳಿಸುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಆರ್ಥಿಕ ಬೆಳವಣಿಗೆಯ ದರ ಪ್ರಸ್ತುತ ಉತ್ತಮವಾಗಿರುವುದರಿಂದ ಫೆಬ್ರವರಿ 2023ರಿಂದ ಚಾಲ್ತಿಯಲ್ಲಿರುವ ಶೇಕಡಾ 6.5ರಷ್ಟು (ರೆಪೊ) ಬಡ್ಡಿದರವನ್ನು ಸದ್ಯಕ್ಕೆ ಹಣಕಾಸು ನೀತಿ ಸಮಿತಿ (ಎಂಪಿಸಿ) ಬದಲಾಯಿಸದೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.
ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಎಂಪಿಸಿ ಸಭೆ ಜೂನ್ 5 ರಿಂದ 7ರವರೆಗೆ ನಡೆಯಲಿದೆ. ಜೂನ್ 7ರಂದು (ಶುಕ್ರವಾರ) ನಿರ್ಧಾರ ಸಭೆಯ ನಿರ್ಧಾರ ಪ್ರಕಟವಾಗಲಿದೆ. ಏತನ್ಮಧ್ಯೆ ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4ರಂದು ಹೊರಬೀಳಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಈ ಹಿಂದೆ ಕೊನೆಯ ಬಾರಿಗೆ ಫೆಬ್ರವರಿ 2023ರಲ್ಲಿ ರೆಪೊ ದರವನ್ನು ಶೇಕಡಾ 6.5ಕ್ಕೆ ಹೆಚ್ಚಿಸಿತ್ತು ಮತ್ತು ಅಂದಿನಿಂದ ಅದು ತನ್ನ ಹಿಂದಿನ ಆರು ದ್ವೈಮಾಸಿಕ ಪಾಲಿಸಿಗಳಲ್ಲಿ ದರವನ್ನು ಬದಲಾಯಿಸದೆ ಅದೇ ಮಟ್ಟದಲ್ಲಿರಿಸಿದೆ. ಜೂನ್ 7ರಂದು ಬಡ್ಡಿದರದಲ್ಲಿ ಮತ್ತೆ ಬದಲಾವಣೆ ಮಾಡದಿದ್ದರೆ, ಆರ್ಬಿಐ ತನ್ನ ಬೆಂಚ್ ಮಾರ್ಕ್ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಇದು ಎಂಟನೇ ಬಾರಿಯಾಗಲಿದೆ.