ಮುಂಬೈ(ಮಹಾರಾಷ್ಟ್ರ):ಬುಧವಾರ ರಾತ್ರಿಅಸ್ತಂತಗವಾದ ಭಾರತದ ದಿಗ್ಗಜ ಉದ್ಯಮಿ, ಕೊಡುಗೈ ದಾನಿ ರತನ್ ಟಾಟಾ ಅವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಮುಂಬೈನ ವರ್ಲಿಯಲ್ಲಿರುವ ಚಿತಾಗಾರದಲ್ಲಿ ಪಾರ್ಸಿ ಸಂಪ್ರದಾಯದಂತೆ ಗುರುವಾರ ಸಂಜೆ ನೆರವೇರಿತು. ಮಲಸಹೋದರ ನೊಯೆಲ್ ಟಾಟಾ ಸೇರಿದಂತೆ ಉದ್ಯಮ ದಿಗ್ಗಜರ ಕುಟುಂಬ ಸದಸ್ಯರು, ಟಾಟಾ ಗ್ರೂಪ್‌ನ ಅಧ್ಯಕ್ಷ ಎನ್.ಚಂದ್ರಶೇಖರನ್, ಟಾಟಾ ಸಮೂಹದ ಉದ್ಯೋಗಿಗಳು ಮತ್ತು ಕೈಗಾರಿಕೋದ್ಯಮಿಗಳು ರತನ್ ಟಾಟಾರಿಗೆ ಅಂತಿಮ ವಿದಾಯ ಹೇಳಿದರು.
ಕೇಂದ್ರ ಸಚಿವರಾದ ಅಮಿತ್ ಶಾ, ಪಿಯೂಷ್ ಗೋಯಲ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸೇರಿದಂತೆ ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಅಸೌಖ್ಯದಿಂದಾಗಿ ಬುಧವಾರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಹಿರಿಯ ಉದ್ಯಮಿ ಇಹಲೋಕ ತ್ಯಜಿಸಿದ್ದರು. ಟಾಟಾರ ಅಂತ್ಯಸಂಸ್ಕಾರಕ್ಕೂ ಮೊದಲು ಮುಂಬೈನ ಎನ್‌ಸಿಪಿಎ ಮೈದಾನದಿಂದ ವರ್ಲಿ ಚಿತಾಗಾರದವರೆಗೆ ಅಂತಿಮ ಯಾತ್ರೆ ನಡೆಸಲಾಯಿತು. ಈ ವೇಳೆ ಸಹಸ್ರಾರು ಜನರು ಉದ್ಯಮ ದಿಗ್ಗಜನ ಪಾರ್ಥಿವ ಶರೀರದ ದರ್ಶನ ಪಡೆದರು. ದಾರಿಯುದ್ದಕ್ಕೂ 'ರತನ್ ಟಾಟಾ ಅಮರ್ ರಹೇ' ಎಂಬ ಘೋಷಣೆ ಕೇಳಿಬಂತು.
ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಮಧ್ಯಾಹ್ನ 3:30ರವರೆಗೆ ಎನ್‌ಸಿಪಿಎ ಮೈದಾನದಲ್ಲಿ ಇರಿಸಲಾಗಿತ್ತು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪುತ್ರ ಹಾಗೂ ಸಚಿವ ನಾರಾ ಲೋಕೇಶ್ ಸೇರಿದಂತೆ ಹಲವರು ನಮನ ಸಲ್ಲಿಸಿದರು.