PhonePe Firecracker Insurance: ಇನ್ನೇನು ಕೆಲ ದಿನಗಳಲ್ಲಿ ದೀಪಾವಳಿ ಹಬ್ಬ ಮತ್ತಷ್ಟು ರಂಗು ಪಡೆದುಕೊಳ್ಳಲಿದೆ. ಬೆಳಕಿನ ಹಬ್ಬ ಎಂದೇ ಗುರುತಿಸಿಕೊಂಡಿರುವ ದೀಪಾವಳಿಯಲ್ಲಿ ಲಕ್ಷ್ಮಿ ದೇವಿ ಪೂಜೆ ಬಳಿಕ ಎಲ್ಲ ಮಕ್ಕಳು ಸೇರಿ ದೊಡ್ಡವರು ಪಟಾಕಿಗಳನ್ನು ಸಿಡಿಸಿ ಸಂಭ್ರಮ ಪಡುತ್ತಾರೆ.
ಪಟಾಕಿಗಳನ್ನು ಸಿಡಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಆಕಸ್ಮಿಕವಾಗಿ ಗಾಯಗೊಳ್ಳುವ ಸಾಧ್ಯತೆಗಳಿವೆ. ಪಟಾಕಿ ಸಿಡಿತದಿಂದ ಕೆಲವು ತಮ್ಮ ಕಣ್ಣುಗಳನ್ನು ಕಳೆದುಕೊಳ್ಳುವ ಅಪಾಯ ಇದೆ. ಹೀಗಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕಾದ ಪ್ರಸಂಗವೂ ಎದುರಾಗುತ್ತದೆ. ಇದು ಒಮ್ಮೊಮ್ಮೆ ಹೆಚ್ಚಿನ ವೆಚ್ಚಕ್ಕೂ ಕಾರಣವಾಗಬಹುದು. ಹೀಗಾಗಿ ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ಸುಡುವಾಗ ಗಾಯಗೊಂಡವರಿಗಾಗಿ ಪಾಲಿಸಿ ನೀಡುವ ಉದ್ದೇಶದಿಂದ "ಫೋನ್ ಪೇ" ಸಂಸ್ಥೆಯು ಹೊಸ ರೀತಿಯ ವಿಮೆಯೊಂದನ್ನು ಪರಿಚಯಿಸಿದೆ. ಹಾಗಾದರೆ ಆ ಪಾಲಿಸಿ ಯಾವುದು? ಖರೀದಿಸುವುದು ಹೇಗೆ? ಪಾಲಿಸಿ ಎಷ್ಟು ಜನರನ್ನು ಒಳಗೊಂಡಿರಲಿದೆ? ಈ ಬಗೆಗಿನ ಸಂಪೂರ್ಣ ವಿವರ ಇಲ್ಲಿದೆ.
ಫೈರ್ ಕ್ರ್ಯಾಕರ್ ವಿಮೆಎಂಬ ಹೆಸರಿನಲ್ಲಿ ಫೋನ್‌ಪೇ ಈ ವಿಮೆಯನ್ನು ಆರಂಭಿಸಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿದು ಆಕಸ್ಮಿಕವಾಗಿ ಗಾಯಗೊಂಡವರಿಗೆ ಈ ವಿಮೆ ರಕ್ಷಣೆ ನೀಡುತ್ತದೆ. ಕೇವಲ 9 ರೂಪಾಯಿ ಪಾವತಿಸಿದರೆ 25,000 ರೂ.ವರೆಗೆ ಕವರೇಜ್ ಸಿಗಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಅಕ್ಟೋಬರ್ 25 ರಿಂದ 10 ದಿನಗಳವರೆಗೆ ಅಂದರೆ ನವೆಂಬರ್ 3 ರವರೆಗೆ ಈ ವಿಮಾ ರಕ್ಷಣೆ ಲಭ್ಯವಿರುತ್ತದೆ ಎಂದು ಫೋನ್‌ಪೇ ಬಹಿರಂಗಪಡಿಸಿದೆ.
ವಿಮೆ ವ್ಯಾಪ್ತಿಯಲ್ಲಿ ನಾಲ್ವರು:ಫೋನ್‌ಪೇ ಬಳಕೆದಾರರ ಜೊತೆಗೆ ಹೆಂಡತಿ ಮತ್ತು ಮಕ್ಕಳು ಸೇರಿದಂತೆ ನಾಲ್ಕು ಜನರು ಈ ವಿಮೆ ವ್ಯಾಪ್ತಿಯಲ್ಲಿ ಬರುತ್ತಾರೆ ಎಂದು ತಿಳಿದು ಬಂದಿದೆ. ಅಕ್ಟೋಬರ್ 25 ರ ನಂತರ ಪಾಲಿಸಿ ಖರೀದಿಸಿದವರಿಗೆ ಆ ದಿನದಿಂದ ಕವರೇಜ್ ಪ್ರಾರಂಭವಾಗುತ್ತದೆ. ಬಜಾಜ್ ಅಲಿಯಾನ್ಸ್ ದೀಪಾವಳಿಯನ್ನು ಗಮನದಲ್ಲಿಟ್ಟುಕೊಂಡು ಜನರಲ್ ಇನ್ಶೂರೆನ್ಸ್ ಕಂಪನಿಯ ಸಹಯೋಗದೊಂದಿಗೆ ತಂದಿದೆ.