ನವದೆಹಲಿ: ಇ-ಕಾಮರ್ಸ್ ಭಾರತದಲ್ಲಿ ಉದ್ಯೋಗ ಸೃಷ್ಟಿಯ ಪ್ರಮುಖ ಮೂಲವಾಗಿದ್ದು, ಆನ್ ಲೈನ್ ಮಾರಾಟ ಕಂಪನಿಗಳು ದೇಶದಲ್ಲಿ 15.8 ಮಿಲಿಯನ್ (ಸುಮಾರು 1.6 ಕೋಟಿ) ಉದ್ಯೋಗಗಳನ್ನು ಸೃಷ್ಟಿಸಿವೆ ಹಾಗೂ ಇದರಲ್ಲಿ ಸುಮಾರು 3.5 ಮಿಲಿಯನ್ (35 ಲಕ್ಷ) ಮಹಿಳೆಯರು ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಪಹ್ಲೆ ಇಂಡಿಯಾ ಫೌಂಡೇಶನ್ ವರದಿ ಬುಧವಾರ ತಿಳಿಸಿದೆ.
ನವದೆಹಲಿ ಮೂಲದ ನೀತಿ ಸಂಶೋಧನಾ ಸಂಸ್ಥೆಯಾದ ಪಹ್ಲೆ ಇಂಡಿಯಾ ಫೌಂಡೇಶನ್ (ಪಿಐಎಫ್) (Pahle India Foundation) ತಯಾರಿಸಿದ ವರದಿಯನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಬಿಡುಗಡೆ ಮಾಡಿದರು. ದೇಶದಲ್ಲಿ 1.76 ಮಿಲಿಯನ್ ಚಿಲ್ಲರೆ ಉದ್ಯಮಗಳು ಈಗ ಇ-ಕಾಮರ್ಸ್ ವಹಿವಾಟಿನಲ್ಲಿ ಭಾಗಿಯಾಗಿವೆ ಎಂದು ವರದಿ ಹೇಳಿದೆ.
ವರದಿಯ ಪ್ರಕಾರ, ದೊಡ್ಡ ನಗರಗಳ ಗ್ರಾಹಕರಿಗೆ ಹೋಲಿಸಿದರೆ 3 ನೇ ಶ್ರೇಣಿಯ ನಗರಗಳ ಗ್ರಾಹಕರು ತಿಂಗಳಿಗೆ 5,000 ರೂ.ಗಿಂತ ಹೆಚ್ಚು ಮೊತ್ತವನ್ನು ಆನ್ ಲೈನ್ ಶಾಪಿಂಗ್ಗಾಗಿ ಖರ್ಚು ಮಾಡುತ್ತಿದ್ದಾರೆ.
'ಭಾರತದಲ್ಲಿ ಉದ್ಯೋಗ ಮತ್ತು ಗ್ರಾಹಕರ ಕಲ್ಯಾಣದ ಮೇಲೆ ಇ-ಕಾಮರ್ಸ್ನ ಒಟ್ಟಾರೆ ಪರಿಣಾಮ' ಎಂಬ ಹೆಸರಿನ ಈ ವರದಿಯು, ಆಫ್ ಲೈನ್ ಪ್ಲಾಟ್ ಫಾರ್ಮ್ಗಳಿಗೆ ಹೋಲಿಸಿದರೆ ಆನ್ ಲೈನ್ ಮಾರಾಟಗಾರರು ಸರಾಸರಿ 54 ಪ್ರತಿಶತ ಹೆಚ್ಚು ಉದ್ಯೋಗಿಗಳನ್ನು ಮತ್ತು ಎರಡು ಪಟ್ಟು ಹೆಚ್ಚು ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ ಎಂದು ತಿಳಿಸಿದೆ.