ಏಪ್ರಿಲ್ 1, 2024ರಿಂದ ಹೊಸ ಆದಾಯ ತೆರಿಗೆ (IT) ನಿಯಮಗಳು ಜಾರಿಗೆ ಬರಲಿವೆ. ತೆರಿಗೆದಾರರಿಗೆ ಈ ಕುರಿತ ಮಾಹಿತಿ ಅವಶ್ಯಕ.
ಹೊಸ ತೆರಿಗೆ ಪದ್ಧತಿ ಡೀಫಾಲ್ಟ್ ಅಳವಡಿಕೆ- ಏನಿದು?:2024-25ನೇ ಹಣಕಾಸು ವರ್ಷದಿಂದ, ಹೊಸ ತೆರಿಗೆ ಪದ್ಧತಿಯನ್ನು ಡೀಫಾಲ್ಟ್ ಆಗಿ ಜಾರಿಗೊಳಿಸಲಾಗುತ್ತದೆ. ಐಟಿಆರ್ ಫೈಲಿಂಗ್ ಸರಳೀಕರಿಸುವುದು ಮತ್ತು ತೆರಿಗೆಯನ್ನು ಸರಿಯಾಗಿ ಪಾವತಿಸಲು ಜನರನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶ. ಹೊಸ ತೆರಿಗೆ ವ್ಯವಸ್ಥೆಯು ನಿಮಗೆ ಪ್ರಯೋಜನಕಾರಿಯಾಗಿಲ್ಲದೇ ಇದ್ದರೆ, ಹಳೆಯ ತೆರಿಗೆ ವ್ಯವಸ್ಥೆಯನ್ನು ಅನುಸರಿಸಲು ನೀವು ಸ್ವತಂತ್ರರು.
ಎಲಿವೇಟೆಡ್ ಮೂಲ ವಿನಾಯಿತಿ ಮಿತಿ, ರಿಯಾಯಿತಿ: ಏಪ್ರಿಲ್ 1, 2023 ರಿಂದ, ಮೂಲ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಆದಾಗ್ಯೂ, ಆದಾಯ ತೆರಿಗೆ ಕಾಯ್ದೆ-1961ರ ಸೆಕ್ಷನ್ 87ಎ ಪ್ರಕಾರ, ಈ ತೆರಿಗೆ ವಿನಾಯಿತಿ ಮಿತಿ 5 ಲಕ್ಷದಿಂದ 7 ಲಕ್ಷಕ್ಕೆ ಏರಿಸಲಾಗಿದೆ. ಆದ್ದರಿಂದ ಏಪ್ರಿಲ್ 1ರಿಂದ 7 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವ ಎಲ್ಲರಿಗೂ ಸಂಪೂರ್ಣ ತೆರಿಗೆ ರಿಯಾಯಿತಿ ಸಿಗಲಿದೆ. ಅಂದರೆ ಅವರು ಸರ್ಕಾರಕ್ಕೆ ಯಾವುದೇ ಆದಾಯ ತೆರಿಗೆ ಪಾವತಿಸುವ ಅಗತ್ಯವಿಲ್ಲ.
2024-25ರ ಹೊಸ ತೆರಿಗೆ ಸ್ಲ್ಯಾಬ್‌ಗಳು ಈ ರೀತಿ ಇರುತ್ತವೆ:
- 3 ಲಕ್ಷ ರೂ.ಯಿಂದ 6 ಲಕ್ಷ ರೂ.ದವರೆಗೆ ಆದಾಯ ಹೊಂದಿರುವವರಿಗೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತದೆ.
- 6 ಲಕ್ಷದಿಂದ 9 ಲಕ್ಷದವರೆಗೆ ಗಳಿಸುವವರ ಮೇಲೆ ಶೇ.10 ತೆರಿಗೆ.
- 9 ಲಕ್ಷದಿಂದ 12 ಲಕ್ಷ ಗಳಿಸುವವರ ಮೇಲೆ ಶೇ.15 ತೆರಿಗೆ.
- 12 ಲಕ್ಷದಿಂದ 15 ಲಕ್ಷದವರೆಗೆ ಗಳಿಸುವವರ ಮೇಲೆ ಶೇ.20 ತೆರಿಗೆ.
- 15 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುವವರಿಗೆ 30% ತೆರಿಗೆ ವಿಧಿಸಲಾಗುತ್ತದೆ.