ನವದೆಹಲಿ: ಇಂಡಿಗೊ ಏರ್ಲೈನ್ಸ್ನ ಎ320 ವಿಮಾನವು ರನ್ವೇಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ನವೀ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಎನ್ಎಂಐಎ) ತನ್ನ ಮೊದಲ ವಾಣಿಜ್ಯ ವಿಮಾನ ಹಾರಾಟ ಪ್ರಮಾಣೀಕರಣ ಪರೀಕ್ಷೆಯನ್ನು ಭಾನುವಾರ ಯಶಸ್ವಿಯಾಗಿ ನಡೆಸಿದೆ. ಈ ಮೂಲಕ 2025ರ ಆರಂಭದಲ್ಲಿ ವಾಣಿಜ್ಯ ವಿಮಾನಗಳ ಹಾರಾಟ ಆರಂಭಿಸಲು ನವೀ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಜ್ಜಾಗಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ), ಕಸ್ಟಮ್ಸ್, ವಲಸೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಸಿಡ್ಕೊ), ಭಾರತೀಯ ಹವಾಮಾನ ಇಲಾಖೆ (ಐಎಂಡಿ), ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಮತ್ತು ಅದಾನಿ ಏರ್ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಹೆಚ್ಎಲ್) ಮತ್ತು ಇತರ ಪ್ರಮುಖ ಪಾಲುದಾರರ ಹಿರಿಯ ಅಧಿಕಾರಿಗಳು ರನ್ ವೇಯಲ್ಲಿ ಹಾರಾಟ ಪರೀಕ್ಷೆಯ ಮೇಲ್ವಿಚಾರಣೆ ನಡೆಸಿದರು.
"ನವೀ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದು ಮಹತ್ವದ ದಿನವಾಗಿದೆ. ಪ್ರಮಾಣೀಕರಣ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಪ್ರಮುಖ ಮೈಲಿಗಲ್ಲಾಗಿದೆ ಮತ್ತು ನಾವು ಈಗ ವಿಮಾನ ನಿಲ್ದಾಣವನ್ನು ಕಾರ್ಯಗತಗೊಳಿಸಲು ತುಂಬಾ ಸನಿಹದಲ್ಲಿದ್ದೇವೆ. ಪ್ರತಿ ಹಂತದಲ್ಲೂ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಪ್ರಮಾಣೀಕರಣ ಪರೀಕ್ಷೆಯನ್ನು ಯಶಸ್ವಿಗೊಳಿಸುವಲ್ಲಿ ಭಾಗಿಯಾಗಿರುವ ಡಿಜಿಸಿಎ ಮತ್ತು ಎಲ್ಲಾ ಏಜೆನ್ಸಿಗಳಿಗೆ ನಾವು ಕೃತಜ್ಞರಾಗಿದ್ದೇವೆ. ಎನ್ಎಂಐಎ ವಿಶ್ವದರ್ಜೆಯ ವಾಯುಯಾನ ಸೌಲಭ್ಯಗಳನ್ನು ಒದಗಿಸುವುದಲ್ಲದೆ, ಈ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಅನುವು ಮಾಡಿಕೊಡಲಿದೆ" ಎಂದು ಅದಾನಿ ಏರ್ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರುಣ್ ಬನ್ಸಾಲ್ ಹೇಳಿದರು.