ನವದೆಹಲಿ: ಪ್ರಮುಖ ಬ್ಲಾಕ್ ಚೈನ್ ಮತ್ತು ಕ್ರಿಪ್ಟೋಕರೆನ್ಸಿ ಪ್ಲಾಟ್ ಫಾರ್ಮ್ ಬಿನಾನ್ಸ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಲು 18.82 ಕೋಟಿ ರೂ.ಗಳ ದಂಡ ಪಾವತಿಸಬೇಕಿದೆ. ಅಕ್ರಮ ಹಣ ವರ್ಗಾವಣೆ ವಿರೋಧಿ ನಿಯಮಗಳನ್ನು ಉಲ್ಲಂಘಿಸಿ ದೇಶದಲ್ಲಿ ಕಾರ್ಯನಿರ್ವಹಿಸಿದ್ದಕ್ಕಾಗಿ ಹಣಕಾಸು ಗುಪ್ತಚರ ಘಟಕ (ಎಫ್ಐಯು) ಕಂಪನಿಗೆ ಈ ದಂಡ ವಿಧಿಸಿದೆ.
"ಬಿನಾನ್ಸ್ ಕಂಪನಿಯು ಸಲ್ಲಿಸಿದ ಲಿಖಿತ ಮತ್ತು ಮೌಖಿಕ ಹೇಳಿಕೆಗಳನ್ನು ಪರಿಗಣಿಸಿದ ನಂತರ, ಎಫ್ಐಯು- ಐಎನ್ಡಿ ನಿರ್ದೇಶಕರು, ದಾಖಲೆಯಲ್ಲಿ ಲಭ್ಯವಿರುವ ಮಾಹಿತಿಗಳ ಆಧಾರದ ಮೇಲೆ, ಬಿನಾನ್ಸ್ ವಿರುದ್ಧದ ಆರೋಪಗಳು ಸತ್ಯವಾಗಿದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ" ಎಂದು ಎಫ್ಐಯು ಅಧಿಸೂಚನೆ ತಿಳಿಸಿದೆ.
ಇದಲ್ಲದೆ, ಮನಿ ಲಾಂಡರಿಂಗ್ ಚಟುವಟಿಕೆಗಳನ್ನು ಮತ್ತು ಭಯೋತ್ಪಾದನೆಗೆ ಹಣಕಾಸು (ಎಎಂಎಲ್ಸಿಎಫ್ಟಿ) ಒದಗಿಸುವುದನ್ನು ತಡೆಗಟ್ಟಲು 2005ರ ಪಿಎಂಎಲ್ಎ ನಿರ್ವಹಣಾ ನಿಯಮಗಳು (ಪಿಎಂಎಲ್ಎ ನಿಯಮಗಳು) ಜೊತೆಗೆ 2002ರ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ಅಧ್ಯಾಯ 4 ರಲ್ಲಿ ವಿವರಿಸಲಾದ ಬಾಧ್ಯತೆಗಳನ್ನು ಸೂಕ್ತವಾಗಿ ಅನುಸರಿಸುವಂತೆ ಬಿನಾನ್ಸ್‌ಗೆ ನಿರ್ದಿಷ್ಟ ನಿರ್ದೇಶನಗಳನ್ನು ನೀಡಲಾಗಿದೆ." ಎಂದು ಅದು ಹೇಳಿದೆ.
ಬಿನಾನ್ಸ್‌ಗೆ ಎಫ್ಐಯು ದಂಡ ವಿಧಿಸಿದ್ದು ಏಕೆ?: ಭಾರತದಲ್ಲಿ ಕ್ರಿಪ್ಟೋ ಎಕ್ಸ್ ಚೇಂಜ್ಗಳಂತಹ ವರ್ಚುವಲ್ ಡಿಜಿಟಲ್ ಆಸ್ತಿಗಳ ಸೇವಾ ಪೂರೈಕೆದಾರರು ಎಫ್ಐಯುನಲ್ಲಿ ನೋಂದಾಯಿಸಿಕೊಳ್ಳುವುದು ಮತ್ತು ದೇಶದ ಅಕ್ರಮ ಹಣ ವರ್ಗಾವಣೆ ವಿರೋಧಿ ನಿಯಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಆದರೆ ಬಿನಾನ್ಸ್ ಈ ನಿಯಮಗಳನ್ನು ಪಾಲಿಸದ ಕಾರಣದಿಂದ ದಂಡ ವಿಧಿಸಲಾಗಿದೆ. ಏತನ್ಮಧ್ಯೆ ಮೇ ತಿಂಗಳಲ್ಲಿ, ಬಿನಾನ್ಸ್ ಎಫ್ಐಯುನೊಂದಿಗೆ ಆರಂಭಿಕ ನೋಂದಣಿಯನ್ನು ಪೂರ್ಣಗೊಳಿಸಿತು.
ಈ ವರ್ಷದ ಆರಂಭದಲ್ಲಿ, ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) 2002ರ ಅಡಿಯಲ್ಲಿ ಸ್ಥಳೀಯ ಮನಿ ಲಾಂಡರಿಂಗ್ ವಿರೋಧಿ ನಿಯಮಗಳನ್ನು ನೋಂದಾಯಿಸದ ಮತ್ತು ಅನುಸರಿಸದ ಕಾರಣ ಎಫ್ಐಯು ಭಾರತದ ಒಂಬತ್ತು ವಿದೇಶಿ ಕ್ರಿಪ್ಟೊ ವಿನಿಮಯ ಕೇಂದ್ರಗಳನ್ನು ನಿರ್ಬಂಧಿಸಿತ್ತು.
ಕೆನಡಾದಲ್ಲೂ ಬಿನಾನ್ಸ್‌ಗೆ ದಂಡ: ಬಿನಾನ್ಸ್‌ಗೆ ಭಾರತದಲ್ಲಿ ಮಾತ್ರವಲ್ಲದೆ ಕೆನಡಾದಲ್ಲೂ ದಂಡ ವಿಧಿಸಲಾಗಿದೆ. ಈ ವರ್ಷದ ಮೇ ತಿಂಗಳಲ್ಲಿ, ಕೆನಡಾದ ಮನಿ ಲಾಂಡರಿಂಗ್ ವಿರೋಧಿ ಸಂಸ್ಥೆ ಮನಿ ಲಾಂಡರಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಿನಾನ್ಸ್‌ಗೆ 4.38 ಮಿಲಿಯನ್ ಡಾಲರ್ ದಂಡ ವಿಧಿಸಿತ್ತು. ಬಿನಾನ್ಸ್ನ ಪ್ರತಿಸ್ಪರ್ಧಿ ಕ್ರಿಪ್ಟೊ ಕುಕಾಯಿನ್ ಕೂಡ 34.5 ಲಕ್ಷ ರೂ.ಗಳ ಸಣ್ಣ ಪ್ರಮಾಣದ ದಂಡ ಪಾವತಿಸಿ ದೇಶದಲ್ಲಿ ತನ್ನ ಕಾರ್ಯಾಚರಣೆಗಳನ್ನು ಪುನಾರಂಭಿಸಿದೆ.
ಇದನ್ನೂ ಓದಿ: ಸಮುದ್ರಾಹಾರ ರಫ್ತು ದಾಖಲೆಯ ಹೆಚ್ಚಳ: ಭಾರತದಿಂದ ಅತ್ಯಧಿಕ ಮೀನು ಖರೀದಿಸಿದ ಯುಎಸ್, ಚೀನಾ - Seafood Exports From India