ನವದೆಹಲಿ: ಜನ್ ಧನ್ ಮತ್ತು ಮೂಲ ಉಳಿತಾಯ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲ ಮತ್ತು ಇತರ ಖಾತೆಗಳನ್ನು ಹೊಂದಿದ ಗ್ರಾಹಕರು ತಮ್ಮ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳಲು ವಿಫಲವಾದರೆ ಮಾತ್ರ ಬ್ಯಾಂಕುಗಳು ದಂಡ ವಿಧಿಸುತ್ತವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳು ಐದು ವರ್ಷಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದ ಗ್ರಾಹಕರಿಂದ ಸುಮಾರು 8,500 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು.
"ಸಂಸದರು ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ, ಮಿನಿಮಮ್ ಬ್ಯಾಲೆನ್ಸ್ ನಿಯಮವು ಪಿಎಂ ಜನ್ ಧನ್ ಖಾತೆಗಳು ಮತ್ತು ಬಡ ಜನರ ಮೂಲ ಖಾತೆಗಳಿಗೆ ಅನ್ವಯಿಸುವುದಿಲ್ಲ. ನಿರ್ದಿಷ್ಟ ಮಟ್ಟದಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳಲೇಬೇಕು ಎಂಬ ಇತರ ಖಾತೆಗಳಿಗೆ ಮಾತ್ರ ಇದು ಅನ್ವಯಿಸುತ್ತದೆ" ಎಂದು ಸೀತಾರಾಮನ್ ಹೇಳಿದರು.
ಮಿನಿಮಮ್ ಬ್ಯಾಲೆನ್ಸ್ ನಿಯಮದಡಿ 8,500 ಕೋಟಿ ಸಂಗ್ರಹ:2019-20ರ ಹಣಕಾಸು ವರ್ಷದಿಂದ ಐದು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಮಿನಿಮಮ್ ಬ್ಯಾಲೆನ್ಸ್ ನಿಯಮದಡಿ ಸುಮಾರು 8,500 ಕೋಟಿ ರೂ.ಗಳನ್ನು ಸಂಗ್ರಹಿಸಿವೆ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಲಾಗಿತ್ತು.
ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಕಳೆದ ತಿಂಗಳು ಲೋಕಸಭೆಗೆ ಮಾಹಿತಿ ನೀಡಿ, 2024ರ ಹಣಕಾಸು ವರ್ಷದಲ್ಲಿ ಸರಾಸರಿ ಮಾಸಿಕ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಕಾರಣ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಠೇವಣಿದಾರರಿಗೆ 2,331 ಕೋಟಿ ರೂ.ಗಳ ದಂಡ ವಿಧಿಸಿವೆ ಎಂದು ತಿಳಿಸಿದ್ದರು. ಸದ್ಯ ಈ ವಿಚಾರದ ಬಗ್ಗೆ ಸ್ಪಷ್ಟೀಕರಣ ನೀಡಿರುವ ಹಣಕಾಸು ಸಚಿವರು, ಜನ್ ಧನ್ ಖಾತೆಗಳು ಮತ್ತು ಬಡ ಜನರ ಮೂಲ ಖಾತೆಗಳಿಗೆ ಮಿನಿಮಮ್ ಬ್ಯಾಲೆನ್ಸ್ ನಿಯಮ ಅನ್ವಯಿಸುವುದಿಲ್ಲ ಎಂದಿದ್ದಾರೆ.
ಶೇ 23ರರಷ್ಟು ಪಿಎಂಜೆಡಿವೈ ಖಾತೆಗಳು:2014 ರಲ್ಲಿ ಪ್ರಾರಂಭವಾದ ಪಿಎಂಜೆಡಿವೈ ಖಾತೆಗಳ ಸಂಖ್ಯೆ ಈಗ ಭಾರತದ ಒಟ್ಟು ಉಳಿತಾಯ ಖಾತೆಗಳ ಶೇಕಡಾ 23 ರಷ್ಟಿದೆ. ಪಿಐಬಿ ಅಂಕಿಅಂಶಗಳ ಪ್ರಕಾರ, ಪಿಎಂಜೆಡಿವೈ ಅಡಿ 19.07.2024 ರವರೆಗೆ ಒಟ್ಟು 52.81 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದ್ದು, ಇವುಗಳಲ್ಲಿ 2,30,792 ಕೋಟಿ ರೂ.ಗಳಷ್ಟು ಠೇವಣಿಯಿದೆ. ಈ ಪೈಕಿ 29.37 ಕೋಟಿ (ಶೇ 55.6) ಜನ್ ಧನ್ ಖಾತೆಗಳು ಮಹಿಳೆಯರಿಗೆ ಸೇರಿದ್ದು, ಸುಮಾರು 35.15 ಕೋಟಿ (ಶೇ 66.6) ಪಿಎಂಜೆಡಿವೈ ಖಾತೆಗಳನ್ನು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ತೆರೆಯಲಾಗಿದೆ.
ಇದನ್ನೂ ಓದಿ : ಬಿಟಿ ಹತ್ತಿಯಿಂದ ಹೆಚ್ಚಿನ ಇಳುವರಿ, ರೈತರ ಆದಾಯವೂ ಹೆಚ್ಚಳ: ಲೋಕಸಭೆಗೆ ಕೇಂದ್ರದ ಮಾಹಿತಿ - Bt cotton adoption