ನವದೆಹಲಿ: ದೇಶದ ಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ಡ್ ಸರಕುಗಳು) ನಿಯಮಗಳು, 2011 ಕಾನೂನಿಗೆ ತಿದ್ದುಪಡಿ ಮಾಡಲು ಗ್ರಾಹಕ ವ್ಯವಹಾರಗಳ ಸಚಿವಾಲಯವು ಮುಂದಾಗಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಮಾರಾಟವಾಗುವ 25 ಕೆಜಿಗಿಂತ ಹೆಚ್ಚು ತೂಕದ ಅಥವಾ 25 ಲೀಟರ್ಗಿಂತ ಹೆಚ್ಚಿನ ಅಳತೆಯ ಪೂರ್ವ-ಪ್ಯಾಕೇಜ್ ಮಾಡಿದ ಪ್ಯಾಕೇಜ್ಗಳ ಮೇಲೆ ಅದರಲ್ಲಿರುವ ಸರಕುಗಳ ಬಗೆಗಿನ ಮಾಹಿತಿಯ ಮುದ್ರಣವನ್ನು ಕಡ್ಡಾಯಗೊಳಿಸುವುದು ಹೊಸ ತಿದ್ದುಪಡಿಯ ಉದ್ದೇಶವಾಗಿದೆ.
ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ಪಿ), ಸುರಕ್ಷಿತವಾಗಿ ಬಳಸಬಹುದಾದ ಕೊನೆಯ ದಿನಾಂಕ, ತಯಾರಕರ ಮಾಹಿತಿ ಮತ್ತು ಮೂಲ ದೇಶ ಯಾವುದು ಎಂಬೆಲ್ಲ ಪ್ರಮುಖ ವಿವರಗಳನ್ನು ಪ್ಯಾಕೇಜ್ಗಳ ಮೇಲೆ ಪ್ರದರ್ಶಿಸುವ ಮೂಲಕ ಪ್ರಸ್ತುತ ಅಂತಹ ಬೃಹತ್ ಪ್ಯಾಕೇಜ್ಗಳಿಗೆ ನೀಡಲಾಗಿರುವ ಈ ವಿನಾಯಿತಿಯಲ್ಲಿನ ಲೋಪದೋಷವನ್ನು ಸರಿಮಾಡುವ ಗುರಿಯಿಂದ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ.
"25 ಕೆಜಿಗಿಂತ ಹೆಚ್ಚಿನ ಪ್ಯಾಕೇಜ್ ಮಾಡಿದ ಸರಕುಗಳು ಕೂಡ ಚಿಲ್ಲರೆ ಮಾರಾಟಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದರೆ ಹೀಗೆ ಮಾಡುವುದು ಚಿಲ್ಲರೆ ಮಾರಾಟಕ್ಕಾಗಿ ಉದ್ದೇಶಿಸಲಾದ ಪೂರ್ವ-ಪ್ಯಾಕೇಜ್ ಸರಕುಗಳ ಮೇಲೆ ಎಲ್ಲಾ ಮಾಹಿತಿಯನ್ನು ಮುದ್ರಿಸುವ ಉದ್ದೇಶಕ್ಕೆ ವ್ಯತಿರಿಕ್ತವಾಗಿದೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸ್ತಾವಿತ ತಿದ್ದುಪಡಿಯ ಪ್ರಕಾರ ತಯಾರಕರು, ಪ್ಯಾಕರ್ ಗಳು ಮತ್ತು ಆಮದುದಾರರು ಚಿಲ್ಲರೆ ಮಾರಾಟಕ್ಕಾಗಿ ಉದ್ದೇಶಿಸಲಾದ ಎಲ್ಲಾ ಪೂರ್ವ-ಪ್ಯಾಕೇಜ್ ಮಾಡಿದ ಸರಕುಗಳ ಮೇಲೆ ಸಮಗ್ರ ಮಾಹಿತಿಯ ಲೇಬಲ್ ಅನ್ನು ನೀಡುವುದು ಕಡ್ಡಾಯವಾಗಲಿದೆ. ಸಚಿವಾಲಯವು ಜುಲೈ 29 ರವರೆಗೆ ಈ ಪ್ರಸ್ತಾಪದ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸಿದೆ.
ಈ ಕೆಳಗಿನವುಗಳನ್ನು ಹೊರತುಪಡಿಸಿ, ಎಲ್ಲಾ ಪೂರ್ವ-ಪ್ಯಾಕೇಜ್ ಮಾಡಿದ ಸರಕುಗಳಿಗೆ ಹೊಸ ನಿಯಮಗಳು ಅನ್ವಯವಾಗಲಿವೆ:
- 25 ಕಿಲೋಗ್ರಾಂ ಅಥವಾ 25 ಲೀಟರ್ ಗಿಂತ ಹೆಚ್ಚಿನ ಪ್ರಮಾಣದ ಸರಕು ಹೊಂದಿರುವ ಪ್ಯಾಕೇಜ್ಗಳು.
- 50 ಕಿಲೋಗ್ರಾಂಗಿಂತ ಹೆಚ್ಚಿನ ತೂಕ ಹೊಂದಿರುವ ಚೀಲಗಳಲ್ಲಿ ಮಾರಾಟ ಮಾಡಲಾಗುವ ಸಿಮೆಂಟ್, ರಸಗೊಬ್ಬರ ಮತ್ತು ಕೃಷಿ ಉತ್ಪನ್ನಗಳು.
- ಕೈಗಾರಿಕಾ ಅಥವಾ ಸಾಂಸ್ಥಿಕ ಗ್ರಾಹಕರಿಗೆ ಮಾರಾಟ ಮಾಡಲು ಉದ್ದೇಶಿಸಲಾದ ಪ್ಯಾಕೇಜ್ ಮಾಡಿದ ಸರಕುಗಳು.
25 ಕಿಲೋಗ್ರಾಂ ಅಥವಾ 25 ಲೀಟರ್ ಗಿಂತ ಹೆಚ್ಚಿನ ಪ್ಯಾಕೇಜ್ ಗಳಿಗೆ ಪ್ರಸ್ತುತ ವಿನಾಯಿತಿಯು ಚಿಲ್ಲರೆ ಪ್ಯಾಕೇಜ್ ಮಾಡಿದ ಸರಕುಗಳು ಈ ತೂಕವನ್ನು ಮೀರುವುದಿಲ್ಲ ಎಂಬ ಊಹೆಯನ್ನು ಆಧರಿಸಿದೆ. ಆದರೆ ಅಂಥ ದೊಡ್ಡ ಪ್ಯಾಕೇಜ್ಗಳು ಈಗ ಚಿಲ್ಲರೆ ಮಾರಾಟಕ್ಕೂ ಲಭ್ಯವಿವೆ. ಇದು ಎಲ್ಲಾ ಚಿಲ್ಲರೆ ಪೂರ್ವ-ಪ್ಯಾಕೇಜ್ ಸರಕುಗಳ ಮೇಲೆ ಮಾಹಿತಿಗಳನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸುವ ನಿಯಮಗಳ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ಈ ಪ್ರಸ್ತಾವಿತ ತಿದ್ದುಪಡಿಯು ಈ ಸಮಸ್ಯೆಯನ್ನು ಸರಿಪಡಿಸುವ ಮತ್ತು ಮಾರುಕಟ್ಟೆಯಾದ್ಯಂತ ಪ್ರಮಾಣೀಕೃತ ಪ್ಯಾಕೇಜಿಂಗ್ ಮಾಹಿತಿಯ ಮೂಲಕ ಗ್ರಾಹಕರ ಸಮಗ್ರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ : 21 ಸಾವಿರ ಕೋಟಿ ರೂ.ಗೆ ತಲುಪಿದ ಭಾರತದ ಯುದ್ಧ ಶಸ್ತ್ರಾಸ್ತ್ರ ರಫ್ತು: 10 ವರ್ಷಗಳಲ್ಲಿ 30 ಪಟ್ಟು ಹೆಚ್ಚಳ - India Defence Exports