ನವದೆಹಲಿ: ಆನ್ಲೈನ್ನಲ್ಲಿ ಆಹಾರ ಮತ್ತು ಇತರ ವಸ್ತುಗಳನ್ನು ಕ್ಯಾಶ್ ಆನ್ ಡೆಲಿವರಿ ಮೂಲಕ ತರಿಸಿದಾಗ ಚಿಲ್ಲರೆ ಸಮಸ್ಯೆ ಉದ್ಭವವಾಗುವುದು ಸಾಮಾನ್ಯ. ಡೆಲಿವರಿ ಬಾಯ್ಗೆ ನಗದು ರೂಪದಲ್ಲಿ ಹಣ ಪಾವತಿಸಿದಾಗ ಆತನ ಬಳಿ ಅಥವಾ ಗ್ರಾಹಕರ ಬಳಿ ಸರಿಯಾದ ಚಿಲ್ಲರೆ ಇಲ್ಲದೆ ಸಮಸ್ಯೆಯಾಗುತ್ತದೆ. ಇಂಥ ಸಮಸ್ಯೆಯ ಪರಿಹಾರಕ್ಕಾಗಿ ಜೊಮ್ಯಾಟೊ ಈಗ ಉಳಿದ ಚಿಲ್ಲರೆ ಹಣವನ್ನು ಡಿಜಿಟಲ್ ರೂಪದಲ್ಲಿ ಗ್ರಾಹಕರ ಜೊಮ್ಯಾಟೊ ಅಕೌಂಟಿನಲ್ಲಿ ಸೇರಿಸುವ ವಿಧಾನವನ್ನು ಪರಿಚಯಿಸಿದೆ.
ಕ್ಯಾಶ್ ಆನ್ ಡೆಲಿವರಿ ಸಮಯದಲ್ಲಿ ಗ್ರಾಹಕರಿಗೆ ಪಾವತಿಯಾಗಬೇಕಾದ ಚಿಲ್ಲರೆ ಹಣ ಉಳಿದಿದ್ದರೆ ಅದನ್ನು ಜೊಮ್ಯಾಟೊ ಆ್ಯಪ್ನಲ್ಲಿ ಗ್ರಾಹಕರ ಜೊಮ್ಯಾಟೊ ಮನಿ (Zomato Money) ಖಾತೆಗೆ ವರ್ಗಾಯಿಸಲಾಗುವುದು ಮತ್ತು ಅದನ್ನು ಗ್ರಾಹಕರು ಮುಂದಿನ ಬಾರಿ ಆರ್ಡರ್ ಮಾಡುವಾಗ ಅಥವಾ ಡೈನಿಂಗ್ ಔಟ್ ಸಮಯದಲ್ಲಿ ಬಳಸಿಕೊಳ್ಳಬಹುದು ಎಂದು ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಬುಧವಾರ ಹೇಳಿದ್ದಾರೆ. ಇಂಥದೊಂದು ಐಡಿಯಾ ಕೊಟ್ಟಿದ್ದಕ್ಕೆ ಅವರು ಟಾಟಾ ಗ್ರೂಪ್ ಒಡೆತನದ ಬಿಗ್ ಬಾಸ್ಕೆಟ್ ಸಂಸ್ಥೆಗೆ ಥ್ಯಾಂಕ್ಸ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ದೀಪಿಂದರ್ ಗೋಯಲ್, "ಕ್ಯಾಶ್ ಆನ್ ಡೆಲಿವರಿ ಆರ್ಡರ್ಗಳನ್ನು ಪಡೆಯುವ ಸಂದರ್ಭಗಳಲ್ಲಿ ನಿಖರವಾದ ಚಿಲ್ಲರೆ ಹಣ ಹೊಂದಿಸುವುದು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಇನ್ನು ಮುಂದೆ ಗ್ರಾಹಕರು ನಮ್ಮ ಡೆಲಿವರಿ ಪಾರ್ಟ್ನರ್ಗಳಿಗೆ ನಗದು ರೂಪದಲ್ಲಿ ಹಣ ಪಾವತಿಸುವಾಗ ಗ್ರಾಹಕರಿಗೆ ಚಿಲ್ಲರೆ ಹಣ ಬಾಕಿ ನೀಡುವುದು ಉಳಿದಲ್ಲಿ ಅದನ್ನು ತಮ್ಮ ಜೊಮಾಟೊ ಮನಿ ಖಾತೆಗೆ ತಕ್ಷಣವೇ ವರ್ಗಾಯಿಸುವಂತೆ ಕೇಳಬಹುದು. ಈ ಬ್ಯಾಲೆನ್ಸ್ ಮೊತ್ತವನ್ನು ಮುಂದಿನ ಫುಡ್ ಆರ್ಡರ್ ಅಥವಾ ಡೈನಿಂಗ್ ಔಟ್ಗೆ ಬಳಸಬಹುದು" ಎಂದು ತಿಳಿಸಿದ್ದಾರೆ.