ನವದೆಹಲಿ:ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಭಾರತದ ಹಣದುಬ್ಬರ ದರವು ಫೆಬ್ರವರಿಯಲ್ಲಿ ಶೇಕಡಾ 0.2 ಕ್ಕೆ ಇಳಿದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ. ಡಿಸೆಂಬರ್ನಲ್ಲಿ ಶೇಕಡಾ 0.73 ರಷ್ಟಿದ್ದ ಡಬ್ಲ್ಯುಪಿಐ ಹಣದುಬ್ಬರದ ವಾರ್ಷಿಕ ದರದಲ್ಲಿ ಇದು ಸತತ ಮೂರನೇ ತಿಂಗಳು ಕುಸಿತವಾಗಿದೆ.
ಅಧಿಕೃತ ಅಂಕಿ ಅಂಶಗಳ ಪ್ರಕಾರ, ಫೆಬ್ರವರಿಯಲ್ಲಿ ಇಂಧನ ಮತ್ತು ವಿದ್ಯುತ್ ವಲಯದ ಇಂಧನ ಬೆಲೆಯಲ್ಲಿ ಕುಸಿತ ಕಂಡುಬಂದಿದ್ದು, ಹಣದುಬ್ಬರ ದರವು (-) 1.59 ಪರ್ಸೆಂಟ್ ದರದಲ್ಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ. ಅಂತೆಯೇ, ತಯಾರಿಸಿದ ಉತ್ಪನ್ನಗಳ ಬೆಲೆಗಳಲ್ಲಿ ಕೂಡ ಕುಸಿತ ಕಂಡು ಬಂದಿದೆ. ತಯಾರಿಸಿದ ಉತ್ಪನ್ನಗಳ ಹಣದುಬ್ಬರ ದರವು (-) 1.27 ರಷ್ಟಿದೆ.
ಜವಳಿ, ರಾಸಾಯನಿಕ ಮತ್ತು ಕಾಗದದ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರಗಳ ಬೆಲೆಯಲ್ಲಿ ಈ ತಿಂಗಳಲ್ಲಿ ಕುಸಿತ ಕಂಡುಬಂದಿದೆ. ಆದಾಗ್ಯೂ, ಆಹಾರ ಸರಕುಗಳ ವಿಭಾಗದಲ್ಲಿ ಡಬ್ಲ್ಯುಪಿಐ ಬೆಲೆಗಳಲ್ಲಿ ಶೇಕಡಾ 4 ರಷ್ಟು ಹೆಚ್ಚಳ ಕಂಡುಬಂದಿದೆ. ಫೆಬ್ರವರಿಯಲ್ಲಿ ಹಣದುಬ್ಬರದಲ್ಲಿ ಹೆಚ್ಚಳ ದಾಖಲಿಸಿದ ಇತರ ಸರಕುಗಳಲ್ಲಿ ನೈಸರ್ಗಿಕ ಅನಿಲ, ವಿದ್ಯುತ್, ಯಂತ್ರೋಪಕರಣಗಳು ಮತ್ತು ಉಪಕರಣಗಳು ಮತ್ತು ಮೋಟಾರು ವಾಹನಗಳು, ಟ್ರೈಲರ್ ಗಳು ಮತ್ತು ಸೆಮಿ-ಟ್ರೈಲರ್ ಗಳು ಇತ್ಯಾದಿ ಸೇರಿವೆ.