ಕರ್ನಾಟಕ

karnataka

ETV Bharat / business

ಭಾರತದ ಔಷಧ ರಫ್ತು ಶೇ 10ರಷ್ಟು ಏರಿಕೆ: ಯುಎಸ್​, ಯುಕೆಯಿಂದ ಅತ್ಯಧಿಕ ಡಿಮ್ಯಾಂಡ್ - INDIA PHARMA EXPORTS - INDIA PHARMA EXPORTS

ಭಾರತದ ಔಷಧ ರಫ್ತು ಪ್ರಮಾಣ ಈ ವರ್ಷದ ಮೇ ತಿಂಗಳಲ್ಲಿ ಶೇಕಡಾ 10.45 ರಷ್ಟು ಏರಿಕೆಯಾಗಿದೆ.

ಭಾರತದ ಔಷಧ ರಫ್ತು ಶೇ 10ರಷ್ಟು ಏರಿಕೆ
ಭಾರತದ ಔಷಧ ರಫ್ತು ಶೇ 10ರಷ್ಟು ಏರಿಕೆ (IANS (ಸಾಂದರ್ಭಿಕ ಚಿತ್ರ))

By ETV Bharat Karnataka Team

Published : Jun 18, 2024, 3:14 PM IST

ನವದೆಹಲಿ: ಭಾರತದ ಔಷಧ ರಫ್ತು ಪ್ರಮಾಣ ಈ ವರ್ಷದ ಮೇ ತಿಂಗಳಲ್ಲಿ ಶೇಕಡಾ 10.45 ರಷ್ಟು ಏರಿಕೆಯಾಗಿ 2.3 ಬಿಲಿಯನ್ ಡಾಲರ್ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ತಿಂಗಳಲ್ಲಿ ಈ ಪ್ರಮಾಣ 2.08 ಬಿಲಿಯನ್ ಡಾಲರ್ ಆಗಿತ್ತು. ಭಾರತದ ಜೆನೆರಿಕ್ ಔಷಧಿಗಳಿಗೆ ಅಮೆರಿಕ ಮತ್ತು ಯುಕೆ ದೇಶಗಳಿಂದ ಬೇಡಿಕೆ ಹೆಚ್ಚಾಗುತ್ತಿರುವುದು ಕೂಡ ಭಾರತದ ಔಷಧ ರಫ್ತು ಹೆಚ್ಚಳಕ್ಕೆ ಉತ್ತೇಜನ ನೀಡಿದೆ.

"ಭಾರತದ ಔಷಧ ರಫ್ತು ಪ್ರಮಾಣಗಳು ಸಕಾರಾತ್ಮಕ ರೀತಿಯಲ್ಲಿ ಸಾಗುತ್ತಿವೆ ಮತ್ತು ಶೇಕಡಾ 10 ಕ್ಕಿಂತ ಕಡಿಮೆಯಿಲ್ಲದ ಬೆಳವಣಿಗೆಯನ್ನು ಉಳಿಸಿಕೊಳ್ಳುವ ಬಗ್ಗೆ ನಾವು ಆಶಾವಾದಿಯಾಗಿದ್ದೇವೆ" ಎಂದು ಫಾರ್ಮಾಸ್ಯುಟಿಕಲ್ಸ್ ಎಕ್ಸ್ ಪೋರ್ಟ್ ಪ್ರಮೋಷನ್ ಕೌನ್ಸಿಲ್ ಆಫ್ ಇಂಡಿಯಾದ ಮಹಾನಿರ್ದೇಶಕ ರವಿ ಉದಯ್ ಭಾಸ್ಕರ್ ಹೇಳಿದರು.

ರಫ್ತು ಮಾರುಕಟ್ಟೆಗಳಲ್ಲಿ ದೇಶದ ಔಷಧೀಯ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಮಧ್ಯೆ ಭಾರತವು ಈಗ ಪರಿಮಾಣದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಔಷಧ ತಯಾರಕ ರಾಷ್ಟ್ರವಾಗಿದೆ. ಫಾರ್ಮೆಕ್ಸಿಲ್ ಪ್ರಕಾರ, ಯುಎಸ್ ಭಾರತದ ಪ್ರಮುಖ ಔಷಧ ಮಾರುಕಟ್ಟೆಯಾಗಿದೆ. 2024 ರ ಆರ್ಥಿಕ ವರ್ಷದಲ್ಲಿ ಸುಮಾರು 16 ಪ್ರತಿಶತದಷ್ಟು ರಫ್ತು ಹೆಚ್ಚಳದ ನಂತರ, ಅಮೆರಿಕವು ಭಾರತದ ವಾರ್ಷಿಕ ಔಷಧ ರಫ್ತಿನಲ್ಲಿ ಸುಮಾರು 30 ಪ್ರತಿಶತದಷ್ಟು ಪಾಲನ್ನು ಪಡೆದುಕೊಂಡಿದೆ.

ಔಷಧಿಗಳ ಕೊರತೆ ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಖಿನ್ನತೆಯಂತಹ ಜೀವನಶೈಲಿ ಕಾಯಿಲೆಗಳಿಗೆ ಔಷಧಿಗಳ ಹೆಚ್ಚಿನ ಬಳಕೆಯ ಕಾರಣದಿಂದ ಅಮೆರಿಕದಲ್ಲಿ ಕೈಗೆಟುಕುವ ಬೆಲೆಯ ಔಷಧಿಗಳ ಬೇಡಿಕೆ ಹೆಚ್ಚಾಗಲಿದೆ ಎಂದು ಭಾಸ್ಕರ್ ಹೇಳಿದ್ದಾರೆ.

ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ನ ವರದಿಯ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಔಷಧಿಗಳ ಕೊರತೆ ಮುಂದುವರೆದಿರುವುದರಿಂದ 2024-2025 ರಲ್ಲಿ ಭಾರತೀಯ ಔಷಧ ತಯಾರಕರ ಆದಾಯ ಹೆಚ್ಚಳವೂ ಮುಂದುವರೆಯಲಿದೆ. ಭಾರತವು ಜೆನೆರಿಕ್ ಔಷಧ ತಯಾರಿಕೆಯ ಬೃಹತ್ ಕೇಂದ್ರವಾಗಿದೆ ಮತ್ತು ಡಾ. ರೆಡ್ಡೀಸ್, ಸಿಪ್ಲಾ, ಸನ್ ಫಾರ್ಮಾ ಸೇರಿದಂತೆ ಇತರ ಔಷಧ ತಯಾರಕರು ಯುಎಸ್ ಮತ್ತು ಯುರೋಪ್ ಎರಡೂ ದೇಶಗಳಿಗೆ ಗಮನಾರ್ಹ ಪ್ರಮಾಣದ ಔಷಧಿಗಳನ್ನು ರಫ್ತು ಮಾಡಲಿದ್ದಾರೆ.

ವಿಶ್ವದ ಅತಿದೊಡ್ಡ ಔಷಧ ಮಾರುಕಟ್ಟೆಯಾಗಿರುವ ಅಮೆರಿಕದಲ್ಲಿ ಕಳೆದೊಂದು ದಶಕದಿಂದ ಔಷಧಿಗಳ ಕೊರತೆ ಕಾಣಿಸಿಕೊಂಡಿದೆ ಎಂದು ಉತಾಹ್ ಡ್ರಗ್ ಇನ್ಫರ್ಮೇಶನ್ ಸರ್ವಿಸ್​ನ ಅಂಕಿಅಂಶಗಳನ್ನು ಉಲ್ಲೇಖಿಸಿ ಇಂಡಿಯಾ ರೇಟಿಂಗ್ಸ್ ವರದಿಯಲ್ಲಿ ತಿಳಿಸಿದೆ. ಅಮೆರಿಕದಲ್ಲಿ ಏಪ್ರಿಲ್ ವೇಳೆಗೆ 22 ವೈದ್ಯಕೀಯ ವಿಭಾಗಗಳಲ್ಲಿ 233 ಔಷಧಿಗಳ ತೀವ್ರ ಕೊರತೆ ಉಂಟಾಗಿದೆ. ಮುಖ್ಯವಾಗಿ ಕೆಲವು ಔಷಧಿಗಳ ಉತ್ಪಾದನೆ ಸ್ಥಗಿತವಾಗಿರುವುದು, ಹೆಚ್ಚುತ್ತಿರುವ ಬೇಡಿಕೆ ಮತ್ತು ಸಾಗಣೆಯಲ್ಲಿನ ವಿಳಂಬ ಇದಕ್ಕೆ ಕಾರಣವಾಗಿದೆ ಎಂದು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್​ನ ಅಂಕಿಅಂಶಗಳನ್ನು ಉಲ್ಲೇಖಿಸಿ ಅದು ಹೇಳಿದೆ.

ಇದನ್ನೂ ಓದಿ : ಬಜೆಟ್​ಗೆ ತಯಾರಿ: ಇದೇ ವಾರ ಉದ್ಯಮಿಗಳು, ರೈತರೊಂದಿಗೆ ಹಣಕಾಸು ಸಚಿವರ ಸಮಾಲೋಚನೆ - Pre Budget Talks

ABOUT THE AUTHOR

...view details