ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಅವಧಿಗೆ ಭಾರತ ವಿಶ್ವದಲ್ಲಿಯೇ ಮೂರನೇ ದೊಡ್ಡ ಆರ್ಥಿಕ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದ್ದಾರೆ. ಜೊತೆಗೆ ಮುಂದಿನ 6-7 ವರ್ಷಗಳಲ್ಲಿ ಅಂದರೆ 2030 ರಲ್ಲಿ ದೇಶ 7 ಟ್ರಿಲಿಯನ್ ಡಾಲರ್ ಆರ್ಥಿಕ ಬೆಳವಣಿಗೆ ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಹಣಕಾಸು ಸಚಿವಾಲಯ ಮಧ್ಯಂತರ ಬಜೆಟ್ಗೂ ಮುನ್ನ ಮಂಡಿಸಿರುವ 'ಭಾರತದ ಆರ್ಥಿಕ ಸಮೀಕ್ಷೆ'ಯು ಕಳೆದ 10 ವರ್ಷಗಳಲ್ಲಿ ಭಾರತ ಪಡೆದ ಆರ್ಥಿಕ ವೇಗದ ಬಗ್ಗೆ ಮುನ್ನೋಟ ನೀಡಿದೆ. ರಾಜಕೀಯ ವಿರೋಧ ಮತ್ತು ಜಾಗತಿಕ ಸವಾಲುಗಳ ಹೊರತಾಗಿಯೂ ದೇಶದ ಆರ್ಥಿಕತೆಯ ಬೆಳವಣಿಗೆಯು ವೇಗವನ್ನು ಕಾಯ್ದುಕೊಂಡಿದೆ ಎಂದು ವಿಮರ್ಶೆಯಲ್ಲಿ ಹೇಳಲಾಗಿದೆ.
ಇದರ ಜೊತೆಗೆ ಮುಂದಿನ 2030 ರ ವೇಳೆಗೆ ಭಾರತದ ಆರ್ಥಿಕತೆಯು 7 ಟ್ರಿಲಿಯನ್ ಡಾಲರ್ ದಾಟಲಿದೆ. 2024ನೇ ಆರ್ಥಿಕ ವರ್ಷದಲ್ಲಿ ಶೇಕಡಾ 7 ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಲಿದೆ ಎಂದು ವರದಿ ಅಂದಾಜಿಸಿದೆ. ಸೇವಾ ವಲಯದಲ್ಲಿ ಕೃತಕ ಬುದ್ಧಿಮತ್ತೆಯ(ಎಐ) ಸವಾಲು, ಇಂಧನ ಭದ್ರತೆ ಮತ್ತು ವ್ಯಾಪಾರ ಮತ್ತು ಕೌಶಲ್ಯಾಧರಿತ ಉದ್ಯೋಗಿಗಳ ಲಭ್ಯತೆಯೂ ಆರ್ಥಿಕತೆಗೆ ಇರುವ ನಾಲ್ಕು ದೊಡ್ಡ ಸವಾಲುಗಳನ್ನು ವರದಿ ಗುರುತಿಸಿದೆ.
ಸೇವಾ ವಲಯದಲ್ಲಿ ಎಐ ಸವಾಲು:ಕೃತಕ ಬುದ್ಧಿಮತ್ತೆ (ಎಐ)ಯು ಸೇವಾ ವಲಯದಲ್ಲಿ ದೊಡ್ಡ ಸವಾಲಾಗಲಿದೆ ಎಂದು ಹಣಕಾಸು ವರದಿ ಹೇಳಿದೆ. ವಿಶ್ವದ ಎಲ್ಲ ಸರ್ಕಾರಗಳಿಗೆ ಕೃತಕ ಬುದ್ಧಿಮತ್ತೆಯು ಅತಿ ದೊಡ್ಡ ಹೊಡೆತ ನೀಡಿದೆ. ಸೇವಾ ವಲಯದ ಉದ್ಯೋಗದ ಮೇಲೆ ಇದು ಪರಿಣಾಮ ಬೀರಲಿದೆ. ಭಾರತದ ಜಿಡಿಪಿಗೆ ಸೇವಾ ವಲಯದಿಂದಲೇ ಶೇಕಡಾ 50 ಕ್ಕಿಂತ ಹೆಚ್ಚಿನ ಕೊಡುಗೆ ಇದೆ. ಆದಾಗ್ಯೂ, ಭಾರತದ ಜಿಡಿಪಿ ಬೆಳವಣಿಗೆಯು ಕುಂಠಿತವಾಗುವುದಿಲ್ಲ. ಶೇಕಡಾ 7 ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಕೆಲವು ವಿಶ್ಲೇಷಕರು 2025ನೇ ಹಣಕಾಸು ವರ್ಷದಲ್ಲೂ ಇದೇ ಬೆಳವಣಿಗೆ ದರವನ್ನು ಊಹಿಸಿದ್ದಾರೆ.
ಹವಾಮಾನ ಬದಲಾವಣೆಯೂ ವಿಶ್ವ ರಾಷ್ಟ್ರಗಳ ಮೇಲೆ ಪರಿಣಾಮ ಬೀರಲಿದೆ ಎಂದು ನೀತಿ ನಿರೂಪಕರು ಅಂದಾಜಿಸಿದ್ದಾರೆ. ಭಾರತವು 2070 ರ ವೇಳೆಗೆ ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯಕ್ಕೆ ಬದಲಾಗುವ ಗುರಿಯನ್ನು ಹೊಂದಿದೆ. ಇಂಧನ ಭದ್ರತೆ ಸಾಧಿಸುವ ಮೂಲಕ ವ್ಯಾಪಾರ ವಹಿವಾಟನ್ನು ಉತ್ತೇಜಿಸಬೇಕಿದೆ.