ಅಯೋಧ್ಯೆ(ಉತ್ತರ ಪ್ರದೇಶ):ದೇಶೀಯ ಪ್ರವಾಸೋದ್ಯಮದಲ್ಲಿ ಆಧ್ಯಾತ್ಮಿಕ ಸ್ಥಳಗಳು ಪ್ರಧಾನ ಪಾತ್ರ ನಿರ್ವಹಿಸುತ್ತಿವೆ. ಜನರು ತಾವು ನಂಬಿರುವ ಪುಣ್ಯಕ್ಷೇತ್ರಗಳಿಗೆ ಎರಡು ವರ್ಷಕ್ಕೊಮ್ಮೆ ಭೇಟಿ ನೀಡಲು ಪ್ರಯತ್ನಿತ್ತಿದ್ದಾರೆ. ಇಡೀ ಕುಟುಂಬವೇ ಜೊತೆಯಲ್ಲಿ ಯಾತ್ರೆ ಕೈಗೊಳ್ಳುವುದರಿಂದ ಸಾರಿಗೆ ವಲಯದ ಜೊತೆಗೆ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ವ್ಯವಹಾರಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಲವು ಕ್ಷೇತ್ರಗಳ ಆದಾಯ ಹೆಚ್ಚಿದ್ದು, ಸರಕಾರಕ್ಕೆ ತೆರಿಗೆ ರೂಪದಲ್ಲಿ ಭಾರಿ ಆದಾಯ ಬರುತ್ತಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ 2 ತಿಂಗಳ ಯಾತ್ರೆಗಳ ಫಲವಾಗಿ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 357 ಕೋಟಿ ರೂಪಾಯಿ ಆದಾಯ ಬಂದಿತ್ತು ಎಂಬುದು ಗಮನಾರ್ಹ. ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುವುದರೊಂದಿಗೆ ಆಧ್ಯಾತ್ಮಿಕ ಪ್ರವಾಸೋದ್ಯಮ ಮತ್ತಷ್ಟು ಉತ್ತುಂಗಕ್ಕೇರಲಿದೆ ಎಂದು ಎಸ್‌ಬಿಐ ರಿಸರ್ಚ್ ಭವಿಷ್ಯ ನುಡಿದಿದೆ.
ಅಯೋಧ್ಯೆ ರಾಮಮಂದಿರ ನಿರ್ಮಾಣ ಮತ್ತು ಅದಕ್ಕನುಗುಣವಾಗಿ ಕೈಗೊಂಡ ಹೆಚ್ಚುವರಿ ಕ್ರಮಗಳಿಂದಾಗಿ ಉತ್ತರ ಪ್ರದೇಶ ಸರ್ಕಾರವು 2024-25ರಲ್ಲಿ 25,000 ಕೋಟಿ ರೂ ಹೆಚ್ಚುವರಿ ಆದಾಯ ಪಡೆಯಬಹುದು. ಅದರಲ್ಲೂ ಪ್ರವಾಸಿಗರ ಆಗಮನದಿಂದ ಇನ್ನೂ ಹೆಚ್ಚಿನ ಮೊತ್ತ ಸಂಗ್ರಹವಾಗುತ್ತದೆ. ರಸ್ತೆ-ರೈಲು-ವಾಯು ಸಾರಿಗೆಯು ಅವುಗಳ ಸಂಚಾರಕ್ಕೆ ಅನುಗುಣವಾಗಿ ಬೆಳೆಯುವ ಸಾಮರ್ಥ್ಯ ಹೊಂದಿವೆ. ಹೋಟೆಲ್‌ಗಳು ಮತ್ತು ಆಸ್ಪತ್ರೆಗಳು ತಮ್ಮ ಸೇವೆಗಳಿಗಾಗಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತವೆ. 2022ರಲ್ಲಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿರುವ ಒಟ್ಟು 32 ಕೋಟಿ ಜನರ ಪೈಕಿ 2.21 ಕೋಟಿ ಜನರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ವರದಿಯ ಪ್ರಕಾರ, ಒಟ್ಟು ವೆಚ್ಚ 2 ಲಕ್ಷ ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಉತ್ತರ ಪ್ರದೇಶ ಈಗಾಗಲೇ ಐದನೇ ಸ್ಥಾನದಲ್ಲಿದೆ. ಅವರಿಂದ ರಾಜ್ಯಕ್ಕೆ 10,500 ಕೋಟಿ ರೂ ಆದಾಯ ಬರುತ್ತಿದೆ. 2027ರ ವೇಳೆಗೆ ಮಹಾರಾಷ್ಟ್ರದ ಜೊತೆಗೆ ಉತ್ತರ ಪ್ರದೇಶದ ಆರ್ಥಿಕತೆಯು $500 ಬಿಲಿಯನ್ ದಾಟುತ್ತದೆ. ದೇಶದ ಜಿಡಿಪಿಯಲ್ಲಿ ಇದರ ಪಾಲು ಶೇ10 ಆಗಿರುತ್ತದೆ ಎಂದು ಅಂದಾಜಿಸಲಾಗಿದೆ.