ನವದೆಹಲಿ: ಈ ವರ್ಷದ ಜನವರಿಯಲ್ಲಿ ಭಾರತೀಯ ಸ್ಟಾರ್ಟಪ್ ಕಂಪನಿಗಳು 107 ಒಪ್ಪಂದಗಳ ಮೂಲಕ 732.7 ಮಿಲಿಯನ್ ಡಾಲರ್ ಫಂಡಿಂಗ್ ಅನ್ನು ಸಂಗ್ರಹಿಸಿವೆ. ದಿ ಕ್ರೆಡಿಬಲ್ ಸಂಸ್ಥೆಯ ಮಾಹಿತಿಯ ಪ್ರಕಾರ, ಒಟ್ಟು 314.4 ಮಿಲಿಯನ್ ಡಾಲರ್ ಮೌಲ್ಯದ 70 ಆರಂಭಿಕ ಹಂತದ ಒಪ್ಪಂದಗಳು ಮತ್ತು 418.3 ಮಿಲಿಯನ್ ಡಾಲರ್ ಮೌಲ್ಯದ 21 ಬೆಳವಣಿಗೆ-ಹಂತದ ಒಪ್ಪಂದಗಳು ಜನವರಿಯಲ್ಲಿ ನಡೆದಿವೆ. ಇನ್ನು 16 ಒಪ್ಪಂದಗಳು ಅಘೋಷಿತವಾಗಿ ಉಳಿದಿವೆ.
ಕಳೆದ ವರ್ಷ 2023ರ ಡಿಸೆಂಬರ್ನಲ್ಲಿ ಬಂದಿದ್ದ 1.7 ಬಿಲಿಯನ್ ಡಾಲರ್ಗೆ ಹೋಲಿಸಿದರೆ ಈ ವರ್ಷದ ಜನವರಿಯಲ್ಲಿ ಸ್ಟಾರ್ಟಪ್ಗಳ ಫಂಡಿಂಗ್ನಲ್ಲಿ ತೀವ್ರ ಕುಸಿತವಾಗಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಇದು ಜನವರಿಯಲ್ಲಿ ಬಂದ ಅತ್ಯಂತ ಕಡಿಮೆ ಫಂಡಿಂಗ್ ಆಗಿದೆ ಎಂದು ಎನ್ಟ್ರ್ಯಾಕರ್ ವರದಿ ಮಾಡಿದೆ. ಈ ವರ್ಷದ ಜನವರಿಯಲ್ಲಿ ಯಾವುದೇ ಸ್ಟಾರ್ಟಪ್ 100 ಮಿಲಿಯನ್ ಡಾಲರ್ಗಿಂತ ಹೆಚ್ಚಿನ ಫಂಡಿಂಗ್ ಪಡೆಯಲು ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ.
ಫಿನ್ಟೆಕ್ ಸ್ಟಾರ್ಟಪ್ ವಿವಿಫೈ (Vivifi) ಜನವರಿಯಲ್ಲಿ ಒಟ್ಟು 75 ಮಿಲಿಯನ್ ಡಾಲರ್ ಫಂಡಿಂಗ್ ಪಡೆದಿರುವುದು ಅತ್ಯಧಿಕವಾಗಿದೆ. ಐಡ್ಯಾಶ್, ವಾವ್! ಮೊಮೊ, ಇಂಪ್ಯಾಕ್ಟ್ ಅನಾಲಿಟಿಕ್ಸ್ ಮತ್ತು ಬ್ಲೂಸ್ಮಾರ್ಟ್ ಕಳೆದ ತಿಂಗಳು ಹೆಚ್ಚು ಫಂಡಿಂಗ್ ಪಡೆದ ಐದು ಕಂಪನಿಗಳಲ್ಲಿ ಸೇರಿವೆ. ಬೆಳವಣಿಗೆಯ ಹಂತದಲ್ಲಿ ಮೂರು ಕಂಪನಿಗಳಾದ ಒನ್ ಕಾರ್ಡ್, ಇನ್ಫ್ರಾ ಡಾಟ್ ಮಾರ್ಕೆಟ್ ಮತ್ತು ಯುಲು ಡೆಬ್ಟ್ ಫಂಡಿಂಗ್ ಸಂಗ್ರಹಿಸಿವೆ ಎಂದು ಅಂಕಿ ಅಂಶಗಳು ತಿಳಿಸಿವೆ.