ನವದೆಹಲಿ: ಇದೇ ಮೊದಲ ಬಾರಿಗೆ ಭಾರತವು ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ 5ಜಿ ಹ್ಯಾಂಡ್ ಸೆಟ್ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ವರದಿಯೊಂದು ತಿಳಿಸಿದೆ. ಚೀನಾ ಮೊದಲ ಸ್ಥಾನದಲ್ಲಿದೆ.
ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಜಾಗತಿಕ 5ಜಿ ಹ್ಯಾಂಡ್ ಸೆಟ್ ಮಾರಾಟವು 2024 ರ ಮೊದಲಾರ್ಧದಲ್ಲಿ ಶೇಕಡಾ 20 ರಷ್ಟು (ವರ್ಷದಿಂದ ವರ್ಷಕ್ಕೆ) ಹೆಚ್ಚಾಗಿದೆ. 5ಜಿ ಹ್ಯಾಂಡ್ ಸೆಟ್ ಮಾರಾಟದಲ್ಲಿ ಆಪಲ್ ಮುಂಚೂಣಿಯಲ್ಲಿದ್ದು, ಶೇಕಡಾ 25 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಐಫೋನ್ 15 ಸರಣಿ ಮತ್ತು ಐಫೋನ್ 14 ಸರಣಿಯ ಫೋನ್ಗಳು ಅತ್ಯಧಿಕವಾಗಿ ಮಾರಾಟವಾಗಿದ್ದು, ಆಪಲ್ ಜಾಗತಿಕವಾಗಿ 5 ಜಿ ಹ್ಯಾಂಡ್ ಸೆಟ್ ಮಾರುಕಟ್ಟೆಯಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.
5ಜಿ ಹ್ಯಾಂಡ್ ಸೆಟ್ಗಳ ಮಾರಾಟವು ಸ್ಥಿರವಾಗಿ ಬೆಳೆಯುತ್ತಿದೆ ಮತ್ತು ಕಡಿಮೆ ದರದಲ್ಲಿ 5ಜಿ ಹ್ಯಾಂಡ್ ಸೆಟ್ಗಳು ಮಾರುಕಟ್ಟೆಗೆ ಬಂದಿರುವುದರಿಂದ ಉದಯೋನ್ಮುಖ ಮಾರುಕಟ್ಟೆಗಳಲ್ಲಿ 5ಜಿ ಹ್ಯಾಂಡ್ ಸೆಟ್ಗಳು ಉತ್ತಮವಾಗಿ ಮಾರಾಟವಾಗುತ್ತಿವೆ. ಇತರ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಸಹ 5ಜಿ ಹ್ಯಾಂಡ್ ಸೆಟ್ಗಳ ಮಾರಾಟ ಹೆಚ್ಚಾಗುತ್ತಿದೆ. ಉದಯೋನ್ಮುಖ ಮಾರುಕಟ್ಟೆಗಳಲ್ಲಿನ ಗ್ರಾಹಕರು ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಕೊಂಡರೂ ಸಹ ಹೊಸ ಫೋನ್ 5ಜಿ ಆಗಿರಬೇಕೆಂದು ಬಯಸುತ್ತಿದ್ದಾರೆ.