ನವದೆಹಲಿ:ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ವರದಿಯೊಂದು ಶುಕ್ರವಾರ ತಿಳಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳಿಗೆ ಹೆಚ್ಚಿದ ಬೇಡಿಕೆ, ಅನುಕೂಲಕರ ಮುಂಗಾರು ಪರಿಸ್ಥಿತಿಗಳು ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಸರಕಾರ ಕೈಗೊಂಡ ಕ್ರಮಗಳ ಬೆಂಬಲದಿಂದ ದೇಶವು ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದೆ ಎಂದು ವರದಿ ಹೇಳಿದೆ.
ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಜಾಗತಿಕವಾಗಿ ದ್ವಿಚಕ್ರ ವಾಹನಗಳ ಮಾರಾಟವು 2024 ರ ಮೊದಲಾರ್ಧದಲ್ಲಿ ಶೇಕಡಾ 4 ರಷ್ಟು (ವರ್ಷದಿಂದ ವರ್ಷಕ್ಕೆ) ಹೆಚ್ಚಾಗಿದೆ. ಭಾರತ, ಯುರೋಪ್, ಉತ್ತರ ಅಮೆರಿಕ, ಲ್ಯಾಟಿನ್ ಅಮೆರಿಕ ಮತ್ತು ಮಧ್ಯಪ್ರಾಚ್ಯ ಮತ್ತು ಆಫ್ರಿಕಾಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಏರಿಕೆಯಾಗಿದ್ದರೆ, ಚೀನಾ ಮತ್ತು ಆಗ್ನೇಯ ಏಷ್ಯಾ (ಎಸ್ಇಎ)ಗಳಲ್ಲಿ ಕುಸಿತವಾಗಿದೆ.
"ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆ ಈ ವರ್ಷದ ಮೊದಲಾರ್ಧದಲ್ಲಿ ಶೇಕಡಾ 22 ರಷ್ಟು ಗಮನಾರ್ಹ ಬೆಳವಣಿಗೆ ಕಂಡಿದೆ. ಈ ಉತ್ತಮ ಸಾಧನೆಯಿಂದಾಗಿ ಭಾರತವು ಚೀನಾವನ್ನು ಮೀರಿಸಿ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಲು ಭಾರತಕ್ಕೆ ಅವಕಾಶ ಮಾಡಿಕೊಟ್ಟಿದೆ" ಎಂದು ಹಿರಿಯ ವಿಶ್ಲೇಷಕ ಸೌಮೆನ್ ಮಂಡಲ್ ಹೇಳಿದರು.
ಭಾರತದಲ್ಲಿ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯು ಬಲವಾದ ಎರಡಂಕಿ ಬೆಳವಣಿಗೆಯನ್ನು (ವರ್ಷದಿಂದ ವರ್ಷಕ್ಕೆ) ದಾಖಲಿಸಿದೆ.