ನವದೆಹಲಿ: ಉದ್ಯೋಗ ವಲಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ 50ರಷ್ಟು ಹೆಚ್ಚಾದಾಗ ಮಾತ್ರ 7 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಭಾರತದ ಗುರಿ ಸಾಧನೆ ಸಾಧ್ಯ ಎಂದು ತಜ್ಞರು ಹೇಳಿದ್ದಾರೆ. ದೇಶದಲ್ಲಿ ಲಕ್ಷಾಂತರ ಮಹಿಳೆಯರು ಕೆಲಸ ಮಾಡುತ್ತಿದ್ದರೂ ಇವರಲ್ಲಿ ಹೆಚ್ಚಿನವರು ಅಸಂಘಟಿತ ಕ್ಷೇತ್ರಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಪ್ರಮಾಣ ಶೇಕಡಾ 30 ಕ್ಕಿಂತ ಕಡಿಮೆಯಾಗಿದೆ.
ಈ ಬಗ್ಗೆ ಸೋಮವಾರ ಮಾತನಾಡಿದ ಜಾಗತಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಟ್ಯಾಲೆಂಟ್ ಸಲ್ಯೂಷನ್ಸ್ ಪ್ರೊವೈಡರ್ ಎನ್ಎಲ್ಬಿ ಸರ್ವೀಸಸ್ನ ಸಿಇಒ ಸಚಿನ್ ಅಲಗ್, "ಲಿಂಗ ಅಸಮಾನತೆಯನ್ನು ನಿವಾರಿಸುವುದು ಮತ್ತು ಕೃಷಿಯಿಂದ ತಂತ್ರಜ್ಞಾನದವರೆಗೆ ಕೈಗಾರಿಕೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸುವುದು, ಮೌಲ್ಯ ಮತ್ತು ಸಂಪತ್ತನ್ನು ಸೃಷ್ಟಿಸುವುದು ದೇಶದ ಜಿಡಿಪಿಯನ್ನು ಹೆಚ್ಚಿಸಲು ಸಹಾಯಕವಾಗಬಹುದು" ಎಂದು ಹೇಳಿದರು.
ಶಿಕ್ಷಣದ ಕೊರತೆ, ಮದುವೆ ಮತ್ತು ಕುಟುಂಬ ಯೋಜನೆ, ವೇತನ ಅಸಮಾನತೆ ಮತ್ತು ಸಾಮಾಜಿಕ ಅಡೆತಡೆಗಳು ಮಹಿಳಾ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಲು ಕೆಲ ಪ್ರಮುಖ ಕಾರಣಗಳಾಗಿವೆ. ಇದಲ್ಲದೇ ಕೆಲ ಕ್ಷೇತ್ರಗಳು, ವಿಶೇಷವಾಗಿ ಪುರುಷ ಪ್ರಾಬಲ್ಯದ ಕ್ಷೇತ್ರಗಳಾದ ಉತ್ಪಾದನೆ, ನಿರ್ಮಾಣ, ಸಾರಿಗೆ ಮತ್ತು ಐಟಿ / ಬಿಪಿಒಗಳಲ್ಲಿ ಮಹಿಳಾ ಉದ್ಯಮಿಗಳು ಮತ್ತು ಉದ್ಯೋಗಿಗಳು ಸಕ್ರಿಯವಾಗಿ ಪಾಲ್ಗೊಳ್ಳಲು ಅಡೆತಡೆಗಳಿವೆ.