ಮುಂಬೈ: ಜಾಗತಿಕವಾಗಿ 5 ಟಾಪ್ ಷೇರು ಮಾರುಕಟ್ಟೆಗಳ ಪೈಕಿ ಭಾರತವೂ ಒಂದಾಗಿದ್ದು, 2024 ರ ಆರಂಭದಿಂದ ಶೇಕಡಾ 25 ಕ್ಕಿಂತ ಹೆಚ್ಚು ಆದಾಯವನ್ನು (ಮಾರುಕಟ್ಟೆ ಕ್ಯಾಪ್ ದೃಷ್ಟಿಯಿಂದ) ನೀಡಿದೆ. ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್ಇ) ಒಟ್ಟು ಮಾರುಕಟ್ಟೆ ಕ್ಯಾಪ್ ಬುಧವಾರ 462 ಲಕ್ಷ ಕೋಟಿ ರೂ.ಗೆ (5.5 ಟ್ರಿಲಿಯನ್ ಡಾಲರ್ಗಿಂತಲೂ ಹೆಚ್ಚು) ತಲುಪಿರುವುದು ಗಮನಾರ್ಹ.
ಇದೇ ಅವಧಿಯಲ್ಲಿ, ಅಮೆರಿಕ ಷೇರು ಮಾರುಕಟ್ಟೆ ಶೇಕಡಾ 13.50, ಹಾಂಕಾಂಗ್ ಶೇಕಡಾ 4.15, ಜಪಾನ್ ಶೇಕಡಾ 4.02 ಆದಾಯ ನೀಡಿವೆ. ಹಾಗೆಯೇ ಚೀನಾ ಷೇರು ಮಾರುಕಟ್ಟೆ ಶೇಕಡಾ 13.61 ರಷ್ಟು ಋಣಾತ್ಮಕ ಆದಾಯ ನೀಡಿದೆ.
57.28 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಕ್ಯಾಪ್ನೊಂದಿಗೆ ಅಮೆರಿಕ ವಿಶ್ವದ ಅತಿದೊಡ್ಡ ಷೇರು ಮಾರುಕಟ್ಟೆಯಾಗಿದೆ. ಇದರ ನಂತರ, ಚೀನಾ 8.24 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಕ್ಯಾಪ್ನೊಂದಿಗೆ ಎರಡನೇ ಸ್ಥಾನದಲ್ಲಿದೆ, ಜಪಾನ್ 6.49 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಕ್ಯಾಪ್ನೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ಭಾರತವು 5.51 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಕ್ಯಾಪ್ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಹಾಂಕಾಂಗ್ 4.92 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಕ್ಯಾಪ್ ನೊಂದಿಗೆ ವಿಶ್ವದ ಐದನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿದೆ.
2007 ರಲ್ಲಿ ಒಂದು ಟ್ರಿಲಿಯನ್ ಇದ್ದ ಭಾರತೀಯ ಮಾರುಕಟ್ಟೆ:ಭಾರತದ ಷೇರು ಮಾರುಕಟ್ಟೆಯ ಮಾರುಕಟ್ಟೆ ಬಂಡವಾಳೀಕರಣವು ಮೇ 28, 2007 ರಂದು ಮೊದಲ ಬಾರಿಗೆ ಒಂದು ಟ್ರಿಲಿಯನ್ ಡಾಲರ್ ದಾಟಿತ್ತು. ಮುಂದೆ 10 ವರ್ಷಗಳ ನಂತರ, ಅಂದರೆ ಜುಲೈ 10, 2017 ರಂದು ಇದು 2 ಟ್ರಿಲಿಯನ್ ಡಾಲರ್ಗೆ ತಲುಪಿತು. ಅದಾಗಿ ನಾಲ್ಕು ವರ್ಷಗಳ ನಂತರ ಮಾರುಕಟ್ಟೆ ಮೇ 24, 2021 ರಂದು 3 ಟ್ರಿಲಿಯನ್ ಡಾಲರ್ಗೆ ಮುಟ್ಟಿತ್ತು. ಮುಂದೆ ಎರಡು ವರ್ಷಗಳ ನಂತರ, ನವೆಂಬರ್ 30, 2023 ರಂದು 4 ಟ್ರಿಲಿಯನ್ ಡಾಲರ್ಗೆ ತಲುಪಿತು ಮತ್ತು ಮುಂದಿನ ಆರು ತಿಂಗಳಲ್ಲಿ, 2024ರ ಮೇ 24 ರಂದು 5 ಟ್ರಿಲಿಯನ್ ಡಾಲರ್ ದಾಟಿತು.
ಬಲವಾದ ಜಿಡಿಪಿ ಬೆಳವಣಿಗೆಯೇ ಈ ಓಟಕ್ಕೆ ಕಾರಣ:ಬಲವಾದ ಜಿಡಿಪಿಯಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಆಕಾಶಕ್ಕೆ ನೆಗೆಯುತ್ತಿದೆ. 2023-24ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇಕಡಾ 8.2 ರ ದರದಲ್ಲಿ ಬೆಳೆದಿದೆ ಮತ್ತು 2024-25 ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇಕಡಾ 7 ರ ದರದಲ್ಲಿ ಬೆಳೆಯಬಹುದು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.
ಷೇರು ಮಾರುಕಟ್ಟೆಯಿಂದ ಒಮ್ಯಾಕ್ಸ್ಗೆ ನಿಷೇಧ: ರಿಯಲ್ ಎಸ್ಟೇಟ್ ಕಂಪನಿ ಒಮ್ಯಾಕ್ಸ್ ಗೆ ಆಘಾತ ನೀಡಿರುವ ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮಂಗಳವಾರ ಅಧ್ಯಕ್ಷ ರೋಹ್ತಾಸ್ ಗೋಯೆಲ್ ಸೇರಿದಂತೆ ಕಂಪನಿಯ ಉನ್ನತ ಆಡಳಿತ ಮಂಡಳಿಯನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಎರಡು ವರ್ಷಗಳ ಕಾಲ ನಿಷೇಧಿಸಿದೆ. ಕಂಪನಿಯ ಹಣಕಾಸು ವರದಿಗಳಲ್ಲಿ ಅಕ್ರಮ ಎಸಗಿದ್ದರಿಂದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೋಹಿತ್ ಗೋಯೆಲ್ ಮತ್ತು ಇತರ ಮೂವರನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ನಿಷೇಧಿಸಲಾಗಿದೆ.
ಇದನ್ನೂ ಓದಿ : 2023-24ರಲ್ಲಿ 6 ಕೋಟಿ ಐಟಿಆರ್ ಸಲ್ಲಿಕೆ: ಹೊಸ ತೆರಿಗೆ ವ್ಯವಸ್ಥೆಯಡಿ ಶೇ 70ರಷ್ಟು ರಿಟರ್ನ್ಸ್ - Six crore ITRs filed