ಚೆನ್ನೈ: ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳನ್ನು ತಯಾರಿಸುವ ಟಾಟಾ ಮೋಟರ್ಸ್ ಗ್ರೂಪ್ ತಮಿಳುನಾಡಿನಲ್ಲಿ ಸುಮಾರು 9,000 ಕೋಟಿ ರೂ.ಗಳ ವೆಚ್ಚದಲ್ಲಿ ವಾಹನ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂದು ಬುಧವಾರ ಪ್ರಕಟಿಸಲಾಗಿದೆ.
ಟಾಟಾ ಮೋಟಾರ್ಸ್ ಗ್ರೂಪ್ ಬುಧವಾರ ತಮಿಳುನಾಡು ಸರ್ಕಾರದೊಂದಿಗೆ ಘಟಕ ಸ್ಥಾಪನೆಯ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರ, 5 ವರ್ಷಗಳ ಅವಧಿಯಲ್ಲಿ ಸುಮಾರು 9,000 ಕೋಟಿ ರೂ.ಗಳ ಹೂಡಿಕೆ ಮಾಡಲಾಗುತ್ತದೆ ಮತ್ತು ಇದರಿಂದ ನೇರ ಮತ್ತು ಪರೋಕ್ಷವಾಗಿ ಸುಮಾರು 5,000 ಉದ್ಯೋಗಗಳು ಸೃಷ್ಟಿಯಾಗಲಿವೆ.
ಈ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದ ನಂತರ, ಹೂಡಿಕೆ ಉತ್ತೇಜನ ಮತ್ತು ಸೌಲಭ್ಯಕ್ಕಾಗಿ ತಮಿಳುನಾಡಿನ ನೋಡಲ್ ಏಜೆನ್ಸಿಯಾದ ಗೈಡೆನ್ಸ್ ಮತ್ತು ಟಾಟಾ ಮೋಟಾರ್ಸ್ ಗ್ರೂಪ್ ತಂಡಗಳು ಈ ಒಪ್ಪಂದವನ್ನು ಮುಂದೆ ಕೊಂಡೊಯ್ಯಲು ಒಟ್ಟಾಗಿ ಕೆಲಸ ಮಾಡಲಿವೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಉಪಸ್ಥಿತಿಯಲ್ಲಿ ಗೈಡೆನ್ಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿ. ವಿಷ್ಣು ಮತ್ತು ಟಾಟಾ ಮೋಟಾರ್ಸ್ ಗ್ರೂಪ್ ಸಿಎಫ್ಒ ಪಿ.ಬಿ. ಬಾಲಾಜಿ ಈ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು.
"ಇದೇ ಮೊದಲ ಬಾರಿಗೆ ತಮಿಳುನಾಡು ಕೇವಲ 2 ತಿಂಗಳ ಅವಧಿಯಲ್ಲಿ ಎರಡು ದೊಡ್ಡ ಆಟೋಮೊಬೈಲ್ ಉತ್ಪಾದನಾ ಹೂಡಿಕೆಗಳನ್ನು ಪಡೆದುಕೊಂಡಿದೆ" ಎಂದು ತಮಿಳುನಾಡು ಕೈಗಾರಿಕಾ ಸಚಿವ ಟಿ.ಆರ್.ಬಿ. ರಾಜಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. "ನಾವು ಕೇವಲ ಕಾರ್ಖಾನೆಗಳನ್ನು ನಿರ್ಮಿಸುತ್ತಿಲ್ಲ; ನಾವು ಕನಸುಗಳನ್ನು ನನಸಾಗಿಸುತ್ತಿದ್ದೇವೆ ಮತ್ತು ಉಜ್ವಲ, ಹೆಚ್ಚು ಸಮೃದ್ಧ ಭವಿಷ್ಯದತ್ತ ವೇಗವಾಗಿ ಸಾಗುತ್ತಿದ್ದೇವೆ!" ಎಂದು ಅವರು ಎಕ್ಸ್ನಲ್ಲಿ ಬರೆದಿದ್ದಾರೆ.